ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 15:36 IST
Last Updated 26 ಆಗಸ್ಟ್ 2025, 15:36 IST
   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಪ್ರದೇಶ’ದಲ್ಲಿ (ಬಿಬಿಎಂಪಿ) ಬೃಹತ್‌ ಯೋಜನೆಗಳು ಹಾಗೂ ರಚನೆಯಾಗಲಿರುವ ಐದು ನಗರ ಪಾಲಿಕೆಗಳಿಗೆ ಹಣಕಾಸು ಹಂಚಿಕೆ ಮಾಡುವ ಅಧಿಕಾರವುಳ್ಳ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ವನ್ನು (ಜಿಬಿಎ) ರಚಿಸಿ, ನಗರಾಭಿವೃದ್ಧಿ ಇಲಾಖೆ  ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಜಿಬಿಎ ಅಧ್ಯಕ್ಷರಾಗಿದ್ದಾರೆ.  

ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ ಎಂದು ಹೆಸರಿಸಿ, ‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯನ್ನು 2025ರ ಮೇ 15ರಂದು ಜಾರಿ ಮಾಡಲಾಗಿತ್ತು. ಅಂದಿನಿಂದ ನಾಲ್ಕು ತಿಂಗಳಲ್ಲಿ ಜಿಬಿಎ ರಚನೆಯಾಗಬೇಕಿತ್ತು.  

ಜಿಬಿಎಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉಪಾಧ್ಯಕ್ಷರಾಗಿದ್ದಾರೆ. ಬಿಬಿಎಂಪಿಯ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್‌ ಅವರಿಗೆ ಜಿಬಿಎ ಮುಖ್ಯ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದ್ದು, ಅವರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ADVERTISEMENT

ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ ಸೇರಿದಂತೆ ಗ್ರೇಟರ್‌ ಬೆಂಗಳೂರು ಪ್ರದೇಶ ವ್ಯಾಪ್ತಿಯ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಸದಸ್ಯರು ಜಿಬಿಎಗೆ ಪದನಿಮಿತ್ತ ಸದಸ್ಯರಾಗಿದ್ದಾರೆ. ಬಿಡಿಎ, ಬೆಸ್ಕಾಂ, ಜಲಮಂಡಳಿ, ನಗರ ಪೊಲೀಸ್‌, ಬಿಎಂಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರೂ ಸೇರಿದಂತೆ ಒಟ್ಟು 72 ಮಂದಿಯನ್ನು ಪದ ನಿಮಿತ್ತ ಸದಸ್ಯರನ್ನಾಗಿ ನೇಮಿಸಿ, ಆದೇಶಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಿ, ಜುಲೈ 19ರಂದು ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸೆಪ್ಟೆಂಬರ್‌ 2ರಂದು ನಗರ ಪಾಲಿಕೆಗಳ ಗಡಿಯ ಅಂತಿಮ ಅಧಿಸೂಚನೆ ಹೊರಬೀಳಲಿದೆ. ನಂತರ ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳಲಿದೆ. ಸೆಪ್ಟೆಂಬರ್ 3ರ ನಂತರ ಐದು ನಗರ ಪಾಲಿಕೆಗಳ ವಾರ್ಡ್‌ ಪುನರ್‌ ವಿಂಗಡಣೆ ಕಾರ್ಯ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.