ADVERTISEMENT

ದೀಪಾವಳಿಗೆ ಹಸಿರು ಪಟಾಕಿಗಷ್ಟೇ ಅವಕಾಶ: ನಿಯಂತ್ರಣ ಮಂಡಳಿ ಕಟ್ಟಪ್ಪಣೆ

ಆರ್. ಮಂಜುನಾಥ್
Published 11 ಅಕ್ಟೋಬರ್ 2025, 0:29 IST
Last Updated 11 ಅಕ್ಟೋಬರ್ 2025, 0:29 IST
<div class="paragraphs"><p>ಸಿಎಸ್‌ಆರ್‌ಐ ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿ </p></div>

ಸಿಎಸ್‌ಆರ್‌ಐ ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿ

   

– ಪಿಟಿಐ ಚಿತ್ರ 

ಬೆಂಗಳೂರು: ರಾಜ್ಯದಾದ್ಯಂತ ‘ಪರಿಸರಸ್ನೇಹಿ ದೀಪಾವಳಿ’ ಆಚರಣೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದು, ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು, ಪೊಲೀಸರಿಗೆ ತಾಕೀತು ಮಾಡಿದೆ.

ADVERTISEMENT

ನಿಷೇಧಿಸಿರುವ ಪಟಾಕಿಗಳನ್ನು ಮಾರಾಟ ಮಾಡುವವರು, ದಾಸ್ತಾನು ಹೊಂದಿರುವವರ ವಿರುದ್ಧ ಪರಿಸರ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು 2004ರಲ್ಲಿ ಪ್ರತಿ ಜಿಲ್ಲೆಯಲ್ಲೂ ಸ್ಥಾಪನೆಯಾಗಿರುವ ‘ಜಿಲ್ಲಾ ಪರಿಸರ ಸಂರಕ್ಷಣೆ ಪ್ರಾಧಿಕಾರ’ಕ್ಕೆ ಜವಾಬ್ದಾರಿ ವಹಿಸಲಾಗಿದೆ.

ರಾಸಾಯನಿಕ ಹೊಂದಿರುವ ಪಟಾಕಿಗಳ ಬಳಕೆಯಿಂದ ವಾತಾವರಣದಲ್ಲಿ ರಾಸಾಯನಿಕ ಬಿಡುಗಡೆಯಾಗಿ ವಾಯು ಮಾಲಿನ್ಯವಾಗುತ್ತದೆ. ಪಟಾಕಿಗಳನ್ನು ಅಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ, ಅವುಗಳು ಸ್ಫೋಟಗೊಂಡು ಅನೇಕ ಜನರ ಪ್ರಾಣಹಾನಿ/ ಆರೋಗ್ಯಕ್ಕೆ ತೊಂದರೆಯಾಗಿದೆ. ಹಬ್ಬದ ಸಮಯದ ವಾಯು ಮಾದರಿಗಳಲ್ಲಿ ವಾಯು ಮಾಲಿನ್ಯ ವಿಪರೀತವಾಗಿರುವುದು ಕಂಡುಬಂದಿದೆ. ಇದನ್ನೆಲ್ಲ ಗಮನಿಸಿ ಸುಪ್ರೀಂ ಕೋರ್ಟ್‌ ಮಾಲಿನ್ಯ ತಡೆಗಟ್ಟಲು ತೀರ್ಪು ನೀಡಿರುತ್ತದೆ. ಅದರಂತೆ, ಸರ್ಕಾರವೂ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ವಿವಿಧ ಇಲಾಖೆಗಳು, ಪ್ರಾಧಿಕಾರಗಳು ಜಾರಿಗೆ ತರಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಸುಪ್ರೀಂ ಕೋರ್ಟ್‌ 2005ರಲ್ಲಿ ಪಟಾಕಿ ಬಳಕೆ ಕುರಿತಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, 2015, 2018 ರಲ್ಲಿ ಹಲವಾರು ನಿರ್ದೇಶನಗಳನ್ನೂ ನೀಡಿದೆ. ಅದರಂತೆ, ಬೆಳಿಗ್ಗೆ 8 ರಿಂದ ರಾತ್ರಿ 10ವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿರ್ದೇಶನದ ಮೇರೆಗೆ ದೀಪಾವಳಿ ಹಬ್ಬವನ್ನು ‘ಪರಿಸರ ಸ್ನೇಹಿ ದೀಪಾವಳಿ– 2025’ಯಾಗಿ ಆಚರಿಸಲು ಅರಣ್ಯ–ಪರಿಸರ ಸಚಿವರು ಸೂಚಿಸಿದ್ದಾರೆ.

ಹೀಗಾಗಿ, ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶವಿದ್ದು, ಇತರೆ ಪಟಾಕಿಗಳನ್ನು ನಿಷೇಧಿಸಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ, ಮಾರಾಟ, ಬಳಕೆಯನ್ನು ನಿಷೇಧಿಸಲಾಗಿದೆ. ಅಂತಹ ಪಟಾಕಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ಪ್ರಕಾರ ತೀವ್ರವಾದ ಕ್ರಮ ಕೈಗೊಳ್ಳಬೇಕು. ಹಸಿರು ಪಟಾಕಿಯನ್ನಷ್ಟೇ ಬಳಸಿ, ದೀಪಾವಳಿಯನ್ನು ಬೆಳಕು– ಜ್ಞಾನದ ಹಬ್ಬವಾಗಿ ಆಚರಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ಸರ್ಕಾರದ ಎಲ್ಲ ಇಲಾಖೆ, ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರಗಳ ಮುಖ್ಯಸ್ಥರಿಗೆ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯವರು ಸುತ್ತೋಲೆ ಹೊರಡಿಸಿದ್ದಾರೆ.

ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಹಸಿರು ಪಟಾಕಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತಂತೆ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ತನ್ನ ಆದೇಶ ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿನೋದ್‌ ಚಂದ್ರನ್‌ ಅವರು ಇದ್ದ ಪೀಠವು ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ ಮತ್ತು ಇತರರ ವಾದ ಆಲಿಸಿತು.

ದೀಪಾವಳಿ, ಗುರುಪರ್ವ ಮತ್ತು ಕ್ರಿಸ್‌ಮಸ್‌ ಹಬ್ಬಗಳ ವೇಳೆ ದೆಹಲಿಯಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಸಮಯದ ನಿರ್ಬಂಧ ಇಲ್ಲದೇ ಅನುಮತಿ ನೀಡಬೇಕು ಎಂದು ಸರ್ಕಾರಗಳ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಕಾರಣಕ್ಕಾಗಿ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು.

ನಿಷೇಧಕ್ಕೆ ಸುತ್ತೋಲೆ: ಲಿಂಗರಾಜು

ನಗರ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸ್‌ ಮಹಾ ನಿರ್ದೇಶಕರು, ಪೊಲೀಸ್‌ ಆಯುಕ್ತರು, ಸಾರಿಗೆ ಆಯುಕ್ತರು, ಶಿಕ್ಷಣ, ವಾಣಿಜ್ಯ, ಪಶು ಸಂಗೋಪನೆ, ಪೌರಾಡಳಿತ

ನಿರ್ದೇಶನಾಲಯದ ನಿರ್ದೇಶಕರು, ಅಗ್ನಿಶಾಮಕ ಮಹಾ ನಿರ್ದೇಶಕರಿಗೆ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಕ್ಟೋಬರ್‌ ಮೊದಲ ವಾರದಲ್ಲೇ ಸುತ್ತೋಲೆ ಕಳುಹಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲೂ ತಿಳಿಸಲಾಗಿದೆಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜು ತಿಳಿಸಿದರು.

ಈ ಸುತ್ತೋಲೆ ಪ್ರತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೂ ಕಳಹಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.