ADVERTISEMENT

ಅಂತರ್ಜಲ ಹೆಚ್ಚಿಸಿದರೆ ತಲಾ ₹1 ಕೋಟಿ ಬಹುಮಾನ!

60 ಗ್ರಾಮ ಪಂಚಾಯಿತಿಗಳಿಗೆ ಸಿಗಲಿದೆ ಸೌಭಾಗ್ಯ: ಸಚಿವ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 20:15 IST
Last Updated 24 ಜನವರಿ 2019, 20:15 IST
   

ಬೆಂಗಳೂರು: ‘ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸಿ, ಅಂತರ್ಜಲ ಹೆಚ್ಚಿಸಲು ಮುಂದಾಗುವ 60 ಗ್ರಾಮ ಪಂಚಾಯಿತಿಗಳಿಗೆ ತಲಾ ₹ 1 ಕೋಟಿ ಬಹುಮಾನ ನೀಡಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ರಾಷ್ಟೀಯ ಜಲ ಮಿಷನ್ ಮತ್ತು ರಾಜ್ಯದ ಜಲ ಸಂಪನ್ಮೂಲ ಇಲಾಖೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಗುರುವಾರ ಏರ್ಪಡಿಸಿದ್ದ ‘ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಅಂತರ್ಜಲ ಸಂರಕ್ಷಣೆಗೆ ಚೆಕ್ ಡ್ಯಾಂ ನಿರ್ಮಾಣ ಒಳ್ಳೆಯ ಕ್ರಮ. ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಾಣ ಮಾಡಿದ ಎರಡು ಗ್ರಾಮ ಪಂಚಾಯಿತಿಗಳಿಗೆ ತಲಾ ₹ 1 ಕೋಟಿ ನೀಡಲಾಗುವುದು’ ಎಂದರು.

ADVERTISEMENT

‘ರಾಜ್ಯದ ಹಲವೆಡೆ ನದಿ ನೀರು, ನಾಲೆ, ಕಾಲುವೆಗಳಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ನೀರು ಎತ್ತಲಾಗುತ್ತಿದೆ. ಕೆಲವು ಕಡೆ ಕೃತಕ ಕೆರೆ ನಿರ್ಮಿಸಿಕೊಂಡು ನೀರು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಾಲೆ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇಂಥ ಅಕ್ರಮಗಳನ್ನು ಪತ್ತೆ ಮಾಡಿ, ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ನಿರ್ಣಯಿಸಲು ಸಮಿತಿ ರಚಿಸಲಾಗುವುದು’ ಎಂದರು.

‘ನದಿ ನೀರಿನ ಹಂಚಿಕೆ ವಿಚಾರದಲ್ಲಿ ಅಂತರರಾಜ್ಯ ಜಗಳ ಚಾಲ್ತಿಯಲ್ಲಿದೆ. ನೀರು ಅಮೂಲ್ಯ ಆಗುತ್ತಿರುವುದರ ಪರಿಣಾಮ ಇದು. ಜಲಮೂಲ ಹಾಗೂ ನೀರಿನ ಸಂರಕ್ಷಣೆಗೆ ಒತ್ತು ಕೊಟ್ಟರೆ ಪರಾವಲಂಬನೆ ಕಡಿಮೆ ಆಗುತ್ತದೆ’ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಇಂಥ ಯೋಜನೆಗಳ ಜಾರಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.