ADVERTISEMENT

144 ತಾಲ್ಲೂಕುಗಳಲ್ಲಿ ಪಾತಾಳಕ್ಕಿಳಿದ ಅಂತರ್ಜಲ

ಭೀಕರ ಬರದ ಛಾಯೆ ಬೆನ್ನಲ್ಲೆ ರಾಜ್ಯದಾದ್ಯಂತ ಬತ್ತಿದ ಬಾವಿ

ರಾಜೇಶ್ ರೈ ಚಟ್ಲ
Published 19 ಅಕ್ಟೋಬರ್ 2018, 20:06 IST
Last Updated 19 ಅಕ್ಟೋಬರ್ 2018, 20:06 IST
   

ಬೆಂಗಳೂರು: ಕೊಡಗು, ಮಲೆನಾಡು ಪ್ರದೇಶ ಅತಿವೃಷ್ಟಿಯ ಅನಾಹುತಕ್ಕೆ ನಲುಗಿದರೂ, ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳು ಭೀಕರ ಬರಗಾಲದಿಂದ ತತ್ತರಿಸುತ್ತಿವೆ. ಇದರ ಪರಿಣಾಮ, ರಾಜ್ಯಕ್ಕೀಗ ಅಂತರ್ಜಲ ಕುಸಿತದ ಆತಂಕ ಕವಿದಿದೆ.

2015 ಹಾಗೂ 2018ರಲ್ಲಿನ ತಾಲ್ಲೂಕುವಾರು ಸರಾಸರಿ ಅಂತರ್ಜಲ ಸ್ಥಿರ ಮಟ್ಟದ ವ್ಯತ್ಯಾಸ ಗಮನಿಸಿದರೆ, 144 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಷ್ಟೇ ಅಲ್ಲ, ಈ ಕುಸಿತವು ಶೇ 81.81ರಷ್ಟು ಆಗಿದೆ ಎನ್ನುತ್ತವೆ ರಾಜ್ಯ ಅಂತರ್ಜಲ ನಿರ್ದೇಶನಾಲಯದ ಅಂಕಿಅಂಶ.

ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ 100 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ವಾಡಿಕೆಯಂತೆ ಈ ಬಾರಿ ಹಿಂಗಾರು ಆಗದಿದ್ದರೆ ಇಡೀ ರಾಜ್ಯ ಭೀಕರ ಜಲಕ್ಷಾಮಕ್ಕೆ ಸಿಲುಕುವ ಭೀತಿ ಎದುರಾಗಿದೆ. ಈ ಮಧ್ಯೆ, ಬಾವಿಗಳಲ್ಲಿನ ಅಂತರ್ಜಲ ಮಟ್ಟ ದಿನೇ ದಿನೇ ಇಳಿಯುತ್ತಿರುವುದನ್ನು ನಿರ್ದೇಶನಾಲಯ ಗುರುತಿಸಿದೆ.

ADVERTISEMENT

ಅಂತರ್ಜಲ ಮಟ್ಟ ಅಳೆಯಲು ನಿರ್ದೇಶನಾಲಯ ತೆರೆದ ಮತ್ತು ಕೊಳವೆ ಎರಡೂ ಸೇರಿ ಒಟ್ಟು 1,801 ವೀಕ್ಷಣಾ ಬಾವಿಗಳನ್ನು ರಾಜ್ಯದಾದ್ಯಂತ ಗುರುತಿಸಿದೆ. ಪ್ರತಿ ತಿಂಗಳು ಈ ಬಾವಿಗಳಲ್ಲಿ ಅಂತರ್ಜಲ ಮಟ್ಟವನ್ನು ಮಾಪನ ಮಾಡಲಾಗುತ್ತದೆ. ಆ ಮಾಹಿತಿ ಪ್ರಕಾರ, 317 ಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. 624 ಬಾವಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತೀ ಹೆಚ್ಚು ತಳಮಟ್ಟಕ್ಕೆ ಹೋಗಿದೆ.

10 ವರ್ಷಗಳ ಸರಾಸರಿಗೆ ಹೋಲಿಸಿದರೆ ಇದೇ ಆಗಸ್ಟ್‌ ತಿಂಗಳಲ್ಲಿ ಶೇ 60.23ರಷ್ಟು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ನಿರ್ದೇಶನಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಮಟ್ಟಕ್ಕೆ ಕುಸಿದಿರುವುದು ಮತ್ತೊಂದು ಆಘಾತಕಾರಿ ಸಂಗತಿ. ಕಳೆದ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಅಂತರ್ಜಲ ಏರಿಕೆ ಆಗಿಲ್ಲ.

ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾಸನ ಮತ್ತು ಮೈಸೂರು ಜಿಲ್ಲೆಯ ಕೆಲಭಾಗಗಳಲ್ಲಿ ನೀರಿನ ಪ್ರಮಾಣ ಭೂಮಟ್ಟಕ್ಕಿಂತ 20 ಮೀಟರ್‌ಗೂ ಹೆಚ್ಚು ಕುಸಿದಿರುವುದು 2017ರ ಜನವರಿಯ ವರದಿಯಲ್ಲಿಉಲ್ಲೇಖವಾಗಿದೆ.

ಮುಂಗಾರು ಹಾಗೂ ಹಿಂಗಾರು ಮಳೆಯ ಸತತ ಕೊರತೆಯೇ ಅಂತರ್ಜಲ ಮಟ್ಟ ಈ ರೀತಿ ಕುಸಿಯಲು ಕಾರಣ ಎಂದು ನಿರ್ದೇಶನಾಲಯದ ಹಿರಿಯ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.