ADVERTISEMENT

ಹೆಚ್ಚು ಮೊತ್ತ ಪಾವತಿ: ಆರೋಗ್ಯಾಧಿಕಾರಿ ಅಮಾನತು ವಾಪಸ್‌

ಇಂದಿರಾ ಕ್ಯಾಂಟೀನ್‌ ಊಟದ ವ್ಯವಸ್ಥೆಗೆ ₹7 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದ ಡಾ. ಕಲ್ಪನಾ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 16:20 IST
Last Updated 27 ಫೆಬ್ರುವರಿ 2026, 16:20 IST
<div class="paragraphs"><p> ಇಂದಿರಾ ಕ್ಯಾಂಟೀನ್‌</p></div>

ಇಂದಿರಾ ಕ್ಯಾಂಟೀನ್‌

   

– ‍ಪ್ರಜಾವಾಣಿ ಚಿತ್ರ

ADVERTISEMENT

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗೆ ಊಟ ಸರಬರಾಜು ಮಾಡುವ ಸಂಸ್ಥೆಗೆ ₹7 ಕೋಟಿಗೂ ಹೆಚ್ಚು ಬಿಲ್‌ ಪಾವತಿ ಮಾಡಿ, ಅಮಾನತುಗೊಂಡಿದ್ದ ಉಪ ಆರೋಗ್ಯಾಧಿಕಾರಿ ಡಾ.ಪಿ.ಕಲ್ಪನಾ ಅವರನ್ನು ಜಿಬಿಎ ಆಡಳಿತದ ಉಪ ಆಯುಕ್ತರು ಕರ್ತವ್ಯಕ್ಕೆ ಮರು ನಿಯೋಜಿಸಿದ್ದಾರೆ.

ಬಿಬಿಎಂಪಿ ಇದ್ದಾಗ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕಲ್ಪನಾ ಅವರಿಗೆ ಆರೋಗ್ಯಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಆ ಸಂದರ್ಭದಲ್ಲಿ, ಚೆಫ್‌ಟಾಕ್‌ ಫುಡ್‌ ಆ್ಯಂಡ್‌ ಹಾಸ್ಪಿಟಾಲಿಟಿ ಸರ್ವಿಸ್‌ ಸಂಸ್ಥೆ ಬಾಕಿ ಬಿಲ್‌ ಮೊತ್ತ ಪಾವತಿಸಲು ಕೋರಿತ್ತು.

ಇಂದಿರಾ ಕ್ಯಾಂಟೀನ್‌ಗೆ ಊಟದ ವ್ಯವಸ್ಥೆ ನೀಡಿರುವುದಕ್ಕೆ ಮತ್ತು ಬಳಕೆಯಾಗಿರುವುದಕ್ಕೆ ತಯಾರಿಸಿರುವ ವರದಿ ಪ್ರಕಾರ ಚೆಫ್‌ಟಾಕ್‌ ಸಂಸ್ಥೆ ₹2,27,34,474 ಮೊತ್ತ ಪಡೆಯಲು ಅರ್ಹವಾಗಿದೆ. ಆದರೆ, ಆರೋಗ್ಯಾಧಿಕಾರಿ ಡಾ. ಕಲ್ಪನಾ ಅವರು ಪರಿಶೀಲನೆ ನಡೆಸದೆ, ₹9,72,21,787 ಪಾವತಿಸಿದ್ದಾರೆ. ಇದರಿಂದ, ಚೆಫ್‌ಟಾಕ್‌ ಸಂಸ್ಥೆಗೆ ₹7,00,12,396 ಅಧಿಕ ಹಣ ಪಾವತಿಯಾಗಿತ್ತು.

ದಕ್ಷಿಣ ವಲಯ ಆಯುಕ್ತರು ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತರು 2025ರ ಮೇ 15ರಂದು ನಿರ್ಲಕ್ಷ್ಯದ ಬಗ್ಗೆ ವರದಿ ನೀಡಿದ್ದರು. ಇದಾದ ಮರು ದಿನವೇ ಕರ್ತವ್ಯಲೋಪದ ಆರೋಪದ ಮೇಲೆ ಆರೋಗ್ಯಾಧಿಕಾರಿ ಡಾ. ಕಲ್ಪನಾ ಅವರನ್ನು ಅಮಾನತು ಮಾಡಲಾಗಿತ್ತು.

ಈ ಅಮಾನತು ಆದೇಶವನ್ನು ತೆರವುಗೊಳಿಸಿ, ಇಲಾಖಾ ವಿಚಾರಣೆಯನ್ನು ನಿರೀಕ್ಷಿಸಿ, ಡಾ. ಕಲ್ಪನಾ ಅವರನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದಲ್ಲಿ ಉಪ ಆರೋಗ್ಯಾಧಿಕಾರಿ ಹುದ್ದೆಗೆ ನಿಯೋಜಿಸಿ ಜಿಬಿಎ ಆಡಳಿತ ವಿಭಾಗದ ಉಪ ಆಯುಕ್ತರು ಇದೇ ಫೆ.13ರಂದು ಆದೇಶಿಸಿದ್ದಾರೆ.

ಪ್ರತಿಕ್ರಿಯಿಸಲಿಲ್ಲ: ಚೆಫ್‌ಟಾಕ್‌ ಫುಡ್‌ ಆ್ಯಂಡ್‌ ಹಾಸ್ಪಿಟಾಲಿಟಿ ಸರ್ವಿಸ್‌ ಸಂಸ್ಥೆ ಪಡೆದಿರುವ ₹7 ಕೋಟಿಗೂ ಹೆಚ್ಚು ಹಣವನ್ನು ವಾಪಸ್‌ ಪಡೆಯಲಾಗಿದೆಯೇ? ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಜಿಬಿಎ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಹಾಗೂ ಆಡಳಿತದ ಉಪ ಆಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.