ADVERTISEMENT

ಆದಾಯ ಕೊರತೆ: ಸಾಲ ಪಡೆಯುವ ಆಯ್ಕೆಗೆ ರಾಜ್ಯ ಸರ್ಕಾರ ನಿರ್ಧಾರ

ಜಿಎಸ್‌ಟಿ ಪರಿಹಾರ ಮೊತ್ತ: ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿದ್ದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 10:35 IST
Last Updated 2 ಸೆಪ್ಟೆಂಬರ್ 2020, 10:35 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯನ್ನು ಸಾಲವಾಗಿ ಪಡೆಯುವ ಆಯ್ಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಜಿಎಸ್‌ಟಿ ಪರಿಹಾರ ಮೊತ್ತ ನೀಡುವ ಸಂಬಂಧ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದೆ ಇಟ್ಟಿತ್ತು. ಆಯ್ಕೆ ಒಂದರ ಪ್ರಕಾರ, ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗಿರುವ ಕೊರತೆಯನ್ನು ಸಾಲವಾಗಿ ಪಡೆಯಬಹುದು. ಆಯ್ಕೆ ಎರಡರ ಪ್ರಕಾರ, ಕೋವಿಡ್‌ ಪರಿಣಾಮ ಸೇರಿದಂತೆ ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ಕೊರತೆಯನ್ನು ಸಾಲವಾಗಿ ಪಡೆಯುವುದು.

‘ಈ ಎರಡೂ ಆಯ್ಕೆಗಳ ಬಗ್ಗೆ ಮೌಲ್ಯಮಾಪನ ನಡೆಸಿದ ಬಳಿಕ, ಮೊದಲ ಆಯ್ಕೆಯಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಭಾವಿಸಲಾಗಿದೆ. ಹೀಗಾಗಿ, ಈ ಆಯ್ಕೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ADVERTISEMENT

‘ಮೊದಲ ಆಯ್ಕೆಯ ಅಡಿಯಲ್ಲಿ, ಕರ್ನಾಟಕವು ಒಟ್ಟು ₹ 18,289 ಕೋಟಿ ಪರಿಹಾರ ಪಡೆಯಲು ಅರ್ಹವಾಗಿದೆ. ಇದರಲ್ಲಿ ₹ 6,965 ಕೋಟಿ ಸಂಗ್ರಹಿಸಿದ ಸೆಸ್‌ನಿಂದ ಬರುತ್ತದೆ. ಉಳಿದ ₹ 11,324 ಕೋಟಿಯನ್ನು ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಭವಿಷ್ಯದಲ್ಲಿ ಪರಿಹಾರ ಸೆಸ್‌ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯತಿಯ ಸಂಪೂರ್ಣ ಹೊರೆ ಪೂರೈಸಲಾಗುವುದು. ಅಲ್ಲದೆ, ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ (ಜಿಎಎಸ್‌ಡಿಪಿ) ಶೇ 1ರಷ್ಟು (₹ 18,036 ಕೋಟಿ) ಹೆಚ್ಚುವರಿ ಸಾಲವನ್ನು ಯಾವುದೇ ಷರತ್ತಿಗೆ ಒಳಪಡದೆ ಪಡೆಯಲು ಅವಕಾಶವಿದೆ.. ಕೇಂದ್ರ ಸರ್ಕಾರದ ಇದೇ ಮೇ ತಿಂಗಳಲ್ಲಿ ಹೊರಡಿಸಿದ ಆದೇಶದಂತೆ ಕೆಲವು ಸುಧಾರಣೆಗಳನ್ನು ಮಾಡಿದರೆ, ಜಿಎಸ್‌ಡಿಪಿಯ ಶೇ 1ರಷ್ಟು ಸಾಲ ಪಡೆದುಕೊಳ್ಳಬಹುದು. ಅಗತ್ಯವಿದ್ದರೆ, ಈ ಹೆಚ್ಚುವರಿ ಸಾಲವನ್ನು ಮುಂದಿನ ಹಣಕಾಸು ವರ್ಷಕ್ಕೆ ಕೊಂಡೊಯ್ಯಬಹುದು’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

‘ಎರಡನೇ ಆಯ್ಕೆಯಲ್ಲಿ ಕರ್ನಾಟಕ ₹ 25,508 ಕೋಟಿ ಪರಿಹಾರ ಪಡೆಯಲು ಅರ್ಹವಾಗಿದೆ. ಇದರಲ್ಲಿ ₹ 6,965 ಸಂಗ್ರಹಿಸಿದ ಸೆಸ್‌ನಿಂದ ಬರುತ್ತದೆ. ಉಳಿದ ₹ 18,543 ಕೋಟಿಗಳಿಗೆ ಮಾರುಕಟ್ಟೆ ಸಾಲದ ಮೂಲಕ ಸಾಲ ಪಡೆಯಲು ಅವಕಾಶ ಇ‌ದೆ. ಆದರೆ, ಜಿಎಸ್‌ಡಿಪಿಯ ಶೇ 1ರಷ್ಟು (₹18,036 ಕೋಟಿ) ಸಾಲ ಪಡೆಯಲು ರಾಜ್ಯವು ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ರಾಜ್ಯ ಪಡೆಯಬಹುದಾದ ಸಾಲದ ಮೊತ್ತವು ಗಣನೀಯವಾಗಿ, ಅಂದರೆ ₹ 10,817 ಕೋಟಿವರೆಗೂ ಕಡಿಮೆಯಾಗಲಿದೆ. ಅಲ್ಲದೆ, ಈ ಆಯ್ಕೆ ಮಾಡಿಕೊಂಡರೆ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ತನ್ನ ಸಂಪನ್ಮೂಲದಿಂದ ಪಾವತಿಸಬೇಕಾಗುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.