ADVERTISEMENT

ಜಿಎಸ್‌ಟಿ ಪರಿಹಾರ ಕೊಡದೇ ಅನ್ಯಾಯ: ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 21:07 IST
Last Updated 28 ಆಗಸ್ಟ್ 2020, 21:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಜಿಎಸ್‌ಟಿ ಪರಿಹಾರವನ್ನು ನೀಡುವುದಿಲ್ಲ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ನಿಲುವು ರಾಜ್ಯಕ್ಕೆ ಮಾಡಿರುವ ಘೋರ ಅನ್ಯಾಯ. ಇದನ್ನು ಪ್ರತಿಭಟಿಸದೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಂಡ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಎಸಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರವಾಹಪೀಡಿತ ಜನರಿಗೆ ಪರಿಹಾರ ನೀಡಲು ದುಡ್ಡಿಲ್ಲ ಎಂದು ಒಂದು ಕಡೆ ಮುಖ್ಯಮಂತ್ರಿ ಯಡಿ ಯೂರಪ್ಪ ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ, ನಮಗೆ ನೀಡಬೇಕಾಗಿರುವ ನ್ಯಾಯಬದ್ಧ ಜಿಎಸ್‌ಟಿ ಪರಿಹಾರ ಕೊಡಲಾಗುವುದಿಲ್ಲ
ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಜಿಎಸ್‌ಟಿಯಿಂದ ಆಗುವ ನಷ್ಟಕ್ಕೆ ಐದು ವರ್ಷಗಳ ಕಾಲ ಪರಿಹಾರ ನೀಡಬೇಕಾಗಿರುವುದು ಕೇಂದ್ರದ ಸಂವಿಧಾನಾತ್ಮಕ ಕರ್ತವ್ಯ. ಅದರ ನಿರಾಕರಣೆಯೆಂದರೆ ರಾಜ್ಯದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ’ ಎಂದು ಅವರು ಹರಿಹಾಯ್ದಿದ್ದಾರೆ.

‘ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇ 71ರಷ್ಟಾಗಿದೆ ಎಂದುಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೀಗಿದ್ದರೂ
ನಮ್ಮ ತೆರಿಗೆ ಹಣವನ್ನು ನಮಗೆ ನೀಡಲು ನಿರಾಕರಿಸುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಮೋಸ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಬಿಜೆಪಿ ಪ್ರತಿಪಾದಿಸಿತ್ತು. ಇದನ್ನು ನಂಬಿದ ಜನರು 25 ಸಂಸದರನ್ನು ಆರಿಸಿ ಕಳಿಸಿದ್ದರು. ಇವರೆಲ್ಲ ಪ್ರಧಾನಿ ಎದುರು ಮಾತು ಬಾರದ ಕೀಲಿ ಗೊಂಬೆಗಳಂತೆ ವರ್ತಿಸುತ್ತಾ ರಾಜ್ಯದ ಹಿತಶತ್ರುಗಳಾಗಿ ಹೋಗಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

‘ಇದು ಯಾವ ನ್ಯಾಯ’

‘ನಾಲ್ಕು ತಿಂಗಳ ಒಟ್ಟು ಜಿಎಸ್‌ಟಿ ಪರಿಹಾರ ₹13,764 ಕೋಟಿ ರಾಜ್ಯಕ್ಕೆ ಬರಬೇಕಾಗಿದೆ. ಇದು ಕೇಂದ್ರ ಮತ್ತು ರಾಜ್ಯಗಳು ಮಾಡಿಕೊಂಡ ಒಪ್ಪಂದ. ಈಗ ನಮ್ಮ ಖಜಾನೆಯಲ್ಲಿ ದುಡ್ಡಿಲ್ಲ. ನೀವು ಬೇಕಿದ್ದರೆ ಆರ್‌ಬಿಐನಲ್ಲಿ ಸಾಲ ಮಾಡಿ ತೀರಿಸಿಕೊಳ್ಳಿ ಎಂದರೆ ಇದು ಯಾವ ಊರಿನ ನ್ಯಾಯ ನರೇಂದ್ರ ಮೋದಿ ಅವರೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.