ADVERTISEMENT

ರಾಜ್ಯದ ತಲಾ ಆದಾಯ ಹೆಚ್ಚಿಸಿದ ‘ಗ್ಯಾರಂಟಿ’: ಎಚ್‌.ಎಂ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 16:23 IST
Last Updated 23 ಜುಲೈ 2025, 16:23 IST
ಎಚ್‌.ಎಂ. ರೇವಣ್ಣ
ಎಚ್‌.ಎಂ. ರೇವಣ್ಣ   

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿದ್ದು, ರಾಜ್ಯದ ತಲಾ ಆದಾಯ ₹2 ಲಕ್ಷಕ್ಕೆ ಮುಟ್ಟಿದೆ. ಕಾಂಗ್ರೆಸ್‌ ನುಡಿದಂತೆ ನಡೆದಿದೆ. ಆದರೂ, ವಿರೋಧ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಟೀಕೆ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ ದೂರಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಜಾರಿಗೆ ಕಾಂಗ್ರೆಸ್‌ ಭರವಸೆ ನೀಡಿದ ದಿನದಿಂದಲೂ ಬಿಜೆಪಿ, ಜೆಡಿಎಸ್‌ ನಾಯಕರು ಟೀಕೆ ಮಾಡುತ್ತಾ ಬಂದಿದ್ದಾರೆ. ಆರಂಭದಲ್ಲಿ ಇದು ಹುಸಿ ಭರವಸೆ ಎಂದು, ನಂತರ ಎಲ್ಲ ಗ್ಯಾರಂಟಿಗಳ ಜಾರಿ ಅಸಾಧ್ಯ ಎಂದು ಸುಳ್ಳು ಆರೋಪ ಮಾಡಿದರು. ಸರ್ಕಾರ ದಿವಾಳಿಯಾಗುತ್ತದೆ ಎಂದು ಟೀಕಿಸಿದರು. ಈಗ ಎಲ್ಲವೂ ಸುಸುತ್ರವಾಗಿ ನಡೆದರೂ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಕ್ತಿ ಯೋಜನೆ ಭಾರತದಲ್ಲೇ ಅತ್ಯುತ್ತಮ ಯೋಜನೆಯಾಗಿದೆ. ಮಹಿಳೆಯರು 500 ಕೋಟಿ ಟಿಕೆಟ್‌ ಪಡೆದಿದ್ದಾರೆ. ಅರ್ಥಶಾಸ್ತ್ರಜ್ಞರಾದ ಅಮೃತ್‌ ಸೇನ್, ಅಭಿಜಿತ್‌ ಅವರು ಯೋಜನೆಯನ್ನು ಹೊಗಳಿದ್ದಾರೆ. ಹಣದ ಚಲಾವಣೆಯಿಂದ ಸಾಕಷ್ಟು ಅನುಕೂಲಗಳಾಗಿವೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಅನ್ನಭಾಗ್ಯ ಬಡವರ ಹಸಿವು ನೀಗಿಸಿದೆ ಎಂದರು.

ADVERTISEMENT

ಚುನಾವಣೆ ವೇಳೆ ಉದ್ಯೋಗ ನೀಡುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆಯಲಿಲ್ಲ. ಬಿಜೆಪಿಯ ಒಬ್ಬರೂ ಅವರನ್ನು ಟೀಕೆ ಮಾಡಲಿಲ್ಲ. ಅವರಿಗೆ ಬರೀ ಗುಜರಾತ್‌ ಮಾದರಿಯದೇ ಚಿಂತೆ. ಅಲ್ಲಿನ ಹಳ್ಳಿಗಳ ಸ್ಥಿತಿ ಕೆಟ್ಟದಾಗಿದೆ ಎಂದು ಹೇಳಿದರು.

ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ವಿಧಾನಪರಿಷತ್‌ ಮಾಜಿ ಸದಸ್ಯ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.