ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್
ಬೆಂಗಳೂರು: ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ದೇಶದ ಬಹುತೇಕ ರಾಜ್ಯಗಳ ಜನರ ಖರೀದಿ ಶಕ್ತಿಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಆದರೆ, ಕರ್ನಾಟಕದ ಜನರ ಖರೀದಿ ಶಕ್ತಿಯು ನಿಗದಿತ ಆರ್ಥಿಕ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.
ಯೂನಿವರ್ಸಲ್ ಬೇಸಿಕ್ ಇನ್‌ಕಂ ಎಂಬ ತತ್ವವನ್ನಾಧರಿಸಿ ಕ್ರಾಂತಿಕಾರಕ ಮಾದರಿಯಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಕಾರಣ. ಅಲ್ಲದೇ, ರಾಜ್ಯದಲ್ಲಿ ಆಹಾರ ಭದ್ರತೆ, ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿರುವುದನ್ನು ದೃಢಪಡಿಸಿವೆ. ಜನರು ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಸರ್ಕಾರಿಂದ ನಗದು ವರ್ಗಾವಣೆ ಪಡೆದ ಕುಟುಂಬಗಳ ಪ್ರಮಾಣ 2022 ರಲ್ಲಿ ಶೇ 9.3 ರಷ್ಟಿದ್ದದ್ದು 2024 ರ ವೇಳೆಗೆ ಅದು ಶೇ 72.7 ಕ್ಕೆ ಏರಿಕೆಯಾಗಿದೆ. ಇದು ಗ್ಯಾರಂಟಿ ಯೋಜನೆಗಳ ಸಾರ್ಥಕತೆಗೆ ಸಾಕ್ಷಿಯಾಗಿದೆ.
ಶಕ್ತಿ ಯೋಜನೆಯು ಮಹಿಳೆಯ ಬದುಕಿನಲ್ಲಿ ಅಪಾರ ಚೈತನ್ಯ ತಂದಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನದಂತೆ ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳೂ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದ್ದು, ಇದು ನಗರದ ಚಲನಶೀಲತೆಯಲ್ಲಿ ಆದ ಪ್ರಮುಖ ಬದಲಾವಣೆ.
ಗ್ಯಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆ ಕಾಳು, ತರಕಾರಿ, ಹಣ್ಣು, ಮೊಟ್ಟೆ ಮತ್ತು ಮಾಂಸ ಮುಂತಾದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಕತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
*ಅಭಿವೃದ್ಧಿ, ಸಾಮಾಜಿಕ ನ್ಯಾಯ, ಹಣಕಾಸಿನ ಶಿಸ್ತು, ಪ್ರಾದೇಶಿಕ ನ್ಯಾಯ, ಜನಸ್ನೇಹಿ ಆಡಳಿತ, ಕಾನೂನು ಸುವ್ಯವಸ್ಥೆ ಮುಂತಾದವುಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಸರ್ಕಾರದ ಅಧೀನದ ಸಂಸ್ಥೆಗಳ ಕಾರ್ಯವೈಖರಿ, ಪೊಲೀಸು, ನ್ಯಾಯ ವ್ಯವಸ್ಥೆ ಮುಂತಾದವುಗಳಲ್ಲಿ ಕರ್ನಾಟಕವು ಇಂದು ದೇಶದಲ್ಲಿ ಹಲವು ಮಾದರಿಗಳನ್ನು ಸೃಷ್ಟಿಸಿದೆ.
*ಬೆಂಗಳೂರು ಮೆಟ್ರೊ ಹಂತ–3 ರ 44.65 ಕಿ.ಮೀ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದರ ಅಂದಾಜು ವೆಚ್ಚ ₹15,611 ಕೋಟಿ. ಈ ಯೋಜನೆಯ ಭಾಗವಾಗಿ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್‌ನಲ್ಲಿ ₹9700 ಕೋಟಿ ವೆಚ್ಚದಲ್ಲಿ ದೇಶದ ಮೊದಲ ರಸ್ತೆ ಮತ್ತು ಮೆಟ್ರೊ ಒಳಗೊಂಡಿರುವ ಡಬಲ್ ಡೆಕ್ಕರ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.59 ಕಿ.ಮೀ ಉದ್ದದ ಮೆಟ್ರೊ–3 ಎ ಯೋಜನೆಉ ವಿಸ್ತೃತ ಯೋಜನಾ ವರದಿ ಅನುಮೋದಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ.
* ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯವನ್ನು ಬಗೆಗರಿಸಲಾಗಿದೆ. ರಾಜ್ಯದ ಜನರ ಜಾತಿವಾರು ಸಮೀಕ್ಷೆ ನಡೆಸಿ ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನಗಳ ಸ್ಥಿತಿಗಳನ್ನು ಅಧ್ಯಯನ ಮಾಡಿ ನೀಡಿದ ವರದಿಯ ಆಧಾರದ ಮೇಲೆ ದಮನಿತ ಸಮುದಾಯಗಳ ಕಲ್ಯಾಣಗಳಿಗೆ ಬೇಕಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ
*2025–26 ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಒಟ್ಟು ₹42,018 ಕೋಟಿ ಅನುದಾನವನ್ನು ಒದಗಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.