ADVERTISEMENT

ಅತಿಥಿ ಉಪನ್ಯಾಸಕರ ನೇಮಕ ವಿಳಂಬ: ಪದವಿ ಕಾಲೇಜು ಸೆಮಿಸ್ಟರ್‌ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 15:40 IST
Last Updated 30 ಸೆಪ್ಟೆಂಬರ್ 2025, 15:40 IST
Venugopala K.
   Venugopala K.

ಬೆಂಗಳೂರು: ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗಿರುವ ಕಾರಣ ದಿಂದಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಸೆಮಿಸ್ಟರ್‌ ಅವಧಿ ಯನ್ನು ಒಂದು ತಿಂಗಳು ವಿಸ್ತರಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಕಾಲೇಜುಗಳ (ತಾಂತ್ರಿಕ ಶಿಕ್ಷಣ ಹೊರತುಪಡಿಸಿ) ಒಂದು, ಮೂರು ಮತ್ತು ಐದನೇ ಸೆಮಿಸ್ಟರ್‌ಗಳಿಗೆ ಈ ಆದೇಶ ಅನ್ವಯವಾಗಲಿದ್ದು, ವಿವಿಧ ವಿಶ್ವವಿದ್ಯಾಲಯಗಳು ಮೊದಲು ಪ್ರಕಟಿಸಿದ್ದ ಶೈಕ್ಷಣಿಕ ವೇಳಾಪಟ್ಟಿಯ ಅಂತಿಮ ದಿನಕ್ಕೆ ಅನ್ವಯಿಸಿ,  ವಿಸ್ತರಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಉದಾಹರಣೆಗೆ ಮೈಸೂರು ವಿಶ್ವವಿದ್ಯಾಲಯದ ಸೆಮಿಸ್ಟರ್‌ ಅವಧಿ ಜೂನ್‌ 30ರಿಂದ ಅ.23ರವರೆಗೆ, ಬೆಂಗಳೂರು ವಿಶ್ವವಿದ್ಯಾಲಯದ ಅವಧಿ ಜುಲೈ 11ರಿಂದ ಅ.28ರವರೆಗೆ ನಿಗದಿಯಾಗಿತ್ತು. ಅದನ್ನು ಕ್ರಮವಾಗಿ ನ.22 ಹಾಗೂ ನ.29ಕ್ಕೆ  ವಿಸ್ತರಿಸಲಾಗಿದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಅವುಗಳ ಆರಂಭದ ದಿನಾಂಕದ ಆಧಾರದ ಮೇಲೆ 2026ನೇ ಜನವರಿ 10ರವರೆಗೂ ವಿಸ್ತರಿಸಲಾಗಿದೆ. ಈ ವಿಸ್ತರಣೆ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ ಬದಲಾವಣೆಗೂ ಅನ್ವಯವಾಗಲಿದೆ. ಬೋಧನೆಗೆ ಹೆಚ್ಚಿನ ಸಮಯ ಸಿಗಲಿದ್ದು, ಒತ್ತಡ ನಿವಾರಣೆಗೂ ಸಹಕಾರಿಯಾಗಲಿದೆ. 

ADVERTISEMENT

ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ವಿಳಂಬದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಿದೆ. ಹಾಗಾಗಿ, ಶೈಕ್ಷಣಿಕ ಅವಧಿ ವಿಸ್ತರಿಸಬೇಕು ಎಂದು ಹಲವು ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಆಗ್ರಹಿಸಿದ್ದರು.

ಅ.4 ರಿಂದಲೇ ಕರ್ತವ್ಯಕ್ಕೆ ‘ಅತಿಥಿ’ಗಳು

ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಳಲ್ಲಿ 2024–25ನೇ ಸಾಲಿನಲ್ಲಿ ಕೆಲಸ ಮಾಡಿದ ಅತಿಥಿ ಉಪನ್ಯಾಸಕರು ಅದೇ ಕಾಲೇಜುಗಳಲ್ಲಿ ಅ.4ರಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

ಆಯಾ ಕಾಲೇಜುಗಳು ಪ್ರಸಕ್ತ ವರ್ಷದ ಕಾರ್ಯಭಾರದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಕಾರ್ಯಭಾರ ಕಡಿಮೆಯಾಗಿದ್ದರೆ ಹಿಂದಿನ ವರ್ಷ ಕೆಲಸ ಮಾಡಿದ ವರ ಪಟ್ಟಿಯಲ್ಲಿದ್ದ ಕೊನೆಯ ಅಭ್ಯರ್ಥಿಯನ್ನು ಕೈಬಿಡಬೇಕು. ಅಂದೇ ಇಲಾಖೆಯ ಇಐಎಂಎಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕು. ಅ.4ರ ಒಳಗೆ ಹಾಜರಾಗದ ಅತಿಥಿ ಉಪನ್ಯಾಸಕರನ್ನು ಕೈಬಿಡಬೇಕು. ಉಳಿದ ಕಾರ್ಯಭಾರಕ್ಕೆ ಯುಜಿಸಿ ಅರ್ಹತೆ ಇರುವವರಿಗೆ ಆದ್ಯತೆ ನೀಡಬೇಕು ಎಂದು ಆಯುಕ್ತೆ ಎನ್‌. ಮಂಜುಶ್ರೀ ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.