ADVERTISEMENT

ದೇಶದಲ್ಲಿ ದ್ವೇಷದ ರಾಜಕಾರಣ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:47 IST
Last Updated 25 ಸೆಪ್ಟೆಂಬರ್ 2019, 19:47 IST

ನವದೆಹಲಿ: ದೇಶದಲ್ಲಿ ಕಳೆದ ಐದು ವರ್ಷಗಳಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ. ಕೇಂದ್ರ ಸರ್ಕಾರದ ಆಡಳಿತ ವೈಖರಿ ಪ್ರಶ್ನಿಸುವವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ದೂರಿದರು.

ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರ ಬಂಧನಕ್ಕೆ ಸಂಬಂಧಿಸಿದಂತೆ ಸಂಸದ ಡಿ.ಕೆ. ಸುರೇಶ್‌ ಅವರೊಂದಿಗೆ ಬುಧವಾರ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

‘ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಪುತ್ರ ರೇವಣ್ಣ ಅವರೊಂದಿಗೆ ದೆಹಲಿಗೆ ಬಂದಿದ್ದೇನೆ. ಆದರೆ, ಮುಂಚಿತವಾಗಿಯೇ ಕಾರಾಗೃಹದ ಅನುಮತಿ ಅಗತ್ಯ ಇದ್ದುದರಿಂದ ಭೇಟಿ ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದರು.

ADVERTISEMENT

ವಾರಕ್ಕೆ ಇಂತಿಷ್ಟು ಜನರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲು ಅವಕಾಶ ಇದೆ. ಮುಂಚಿತವಾಗಿಯೇ ಹೆಸರು ನೋಂದಾಯಿಸುವ ನಿಯಮ ಇದೆ ಎಂದು ಹೇಳಲಾಗಿದೆ. ಅದನ್ನು ಪರಿಶೀಲಿಸಬೇಕು. ದೇವೇಗೌಡರೊಂದಿಗೆ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿದ್ದೇನೆ ಎಂದು ಎಂದು ಡಿ.ಕೆ. ಸುರೇಶ ಹೇಳಿದರು.

ಶಾಂತವಾಗಿರಲು ಮನವಿ: ಇ.ಡಿ. ವಿಶೇಷ ನ್ಯಾಯಾಲಯವು ಸಂಜೆ ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶಿಸಿದ ನಂತರ ಮಾತನಾಡಿದ ಸುರೇಶ್‌, ಜಾಮೀನು ದೊರೆಯಲಿಲ್ಲ ಎಂಬ ಕಾರಣದಿಂದ ಬೆಂಬಲಿಗರು ಯಾವುದೇ ರೀತಿಯ ಪ್ರತಿಭಟನೆ ನಡೆಸದೆ ಶಾಂತವಾಗಿರಬೇಕು ಎಂದು ಮನವಿ ಮಾಡಿದರು.

‘ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಇಂದಲ್ಲ ನಾಳೆ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸವಿದೆ. ಸೋದರನಿಗೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ಕಾರಾಗೃಹದ ಅಧೀಕ್ಷಕರು ಗಮನ ಹರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.