ADVERTISEMENT

ಹೋಮ, ಹವನ: ದೇವೇಗೌಡ ಕುಟುಂಬ ಭಾಗಿ

ಕಮ್ಮರಡಿ ಸಮೀಪದ ಕುಡಿನಲ್ಲಿಯ ಉಮಾಮಹೇಶ್ವರ ದೇಗುಲ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:25 IST
Last Updated 3 ಮೇ 2019, 20:25 IST
ಕೊಪ್ಪ ತಾಲ್ಲೂಕು ಉಮಾಮಹೇಶ್ವರ ದೇವಸ್ಥಾನದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಸಾರ್ವಜನಿಕರನ್ನು ತಡೆಯಲಾಗಿತ್ತು.
ಕೊಪ್ಪ ತಾಲ್ಲೂಕು ಉಮಾಮಹೇಶ್ವರ ದೇವಸ್ಥಾನದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಸಾರ್ವಜನಿಕರನ್ನು ತಡೆಯಲಾಗಿತ್ತು.   

ಕೊಪ್ಪ: ತಾಲ್ಲೂಕಿನ ಕಮ್ಮರಡಿ ಸಮೀಪದ ಕುಡಿನಲ್ಲಿ ಗ್ರಾಮದ ಉಮಾಮಹೇಶ್ವರ ದೇಗುಲದಲ್ಲಿ ಶುಕ್ರವಾರ ಪೂಜೆ, ಹೋಮ, ಹವನ ಕೈಂಕರ್ಯಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಪಾಲ್ಗೊಂಡಿದ್ದರು.

ಗಣೇಶ್ ಸೋಮಯಾಜಿ ಅವರು ಕೈಂಕರ್ಯಗಳ ನೇತೃತ್ವ ವಹಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆ ವೇಳೆಗೆ ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಅವರು ದೇಗುಲ ಪ್ರವೇಶಿಸಿದರು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಜತೆಗಿದ್ದರು.

ದೇಗುಲದ ಆವರಣಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮವದರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇಗುಲದ ಸುತ್ತಮುತ್ತ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ‘ಮೊಬೈಲ್‌ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ’ ಎಂಬ ನಾಮಫಲಕವನ್ನು ದೇಗುಲದ ಅನತಿ ದೂರದಲ್ಲಿ ಅಳವಡಿಸಲಾಗಿತ್ತು.

ADVERTISEMENT

‘ವಿಶೇಷ ಪೂಜೆ, ಸಂಕಲ್ಪ ಇತರೆ ಕೈಂಕರ್ಯಗಳು ನಡೆಯಲಿವೆ. ರಾತ್ರಿ ತಲವಾನೆಯಲ್ಲಿ ವಾಸ್ತವ್ಯ ಹೂಡಿ, ಶನಿವಾರ ಪೂರ್ಣಾಹುತಿ ಕೈಂಕರ್ಯದಲ್ಲಿ ಪಾಲ್ಗೊಂಡು ತೆರಳುವರು’ ಎಂದು ಮೂಲಗಳು ತಿಳಿಸಿವೆ.

ಶಾಸಕ ಟಿ.ಡಿ. ರಾಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಆರೋಗ್ಯವೃದ್ಧಿಗೆ ಪ್ರಾರ್ಥಿಸಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದೆ. ಇದು ಅವರ ಕುಟುಂಬದ ಖಾಸಗಿ ಕಾರ್ಯಕ್ರಮ. ರಾಜಕೀಯ ತಳಕು ಹಾಕುವ ಅಗತ್ಯ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಭೇಟಿಗೆ ಪಕ್ಷದ ಸ್ಥಳೀಯ ಮುಖಂಡರಿಗೂ ಅವಕಾಶ ಇಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.