ADVERTISEMENT

‘ಪಕ್ಷ ತೊರೆಯದಿರಿ; ಒಟ್ಟಿಗೆ ಸಾಗೋಣ’: ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 16:47 IST
Last Updated 14 ಫೆಬ್ರುವರಿ 2022, 16:47 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಬೆಂಗಳೂರು: ‘ಜೆಡಿಎಸ್‌ ತೊರೆದು ಹೋಗುವ ಯೋಚನೆಯಲ್ಲಿರುವವರಿಗೆ ಈಗಲೂ ಕಾಲ ಮಿಂಚಿಲ್ಲ. ಒಟ್ಟಿಗೆ ಕೆಲಸ ಮಾಡೋಣ ಬನ್ನಿ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ 123 ಎಂದು ಫಲಕ ಹಾಕಿಕೊಂಡರೆ ಆಗುತ್ತಾ? ಪಕ್ಷ ಸಂಘಟನೆ ಮಾಡಬೇಕು. ಜೆಡಿಎಸ್‌ ಬಿಟ್ಟು ಹೋಗಲು ಸಜ್ಜಾಗಿರುವವರು ಜತೆಗೆ ಬಂದರೆ ಒಟ್ಟಾಗಿಸಾಗುತ್ತೇವೆ’ ಎಂದರು.

ಹಾಸನದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದಾಗ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮತ್ತು ಎ.ಟಿ. ರಾಮಸ್ವಾಮಿ ಗೈರಾಗಿದ್ದರು. ರಾಮಸ್ವಾಮಿ ಪಕ್ಷ ತೊರೆದು ಹೋಗಬಹುದು ಎಂದು ತಾವು ಹೇಳಿರಲಿಲ್ಲ ಎಂದು ಈ ಕುರಿತು ಸ್ಪಷ್ಟನೆ ನೀಡಿದರು.

ADVERTISEMENT

ಸಿ.ಎಂ. ಇಬ್ರಾಹಿಂ ಪಕ್ಷಕ್ಕೆ ಬಂದ ತಕ್ಷಣ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ಅವರ ಗಮನಕ್ಕೂ ತರಲಾಗಿದೆ. ಈಗ ಒಬ್ಬರು ಅಧ್ಯಕ್ಷರಿದ್ದಾರೆ. ಆರು ಬಾರಿ ಶಾಸಕರಾದವರನ್ನು ನಾಳೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ? ಮುಂದೆ ಅಧ್ಯಕ್ಷರ ಆಯ್ಕೆ ಸಮಯದಲ್ಲಿ ಪರಿಗಣಿಸುವುದಾಗಿ ಇಬ್ರಾಹಿಂ ಅವರಿಗೆ ತಿಳಿಸಲಾಗಿದೆ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಏಕೆ ಹೋಗಬೇಕು? ಕುಮಾರಸ್ವಾಮಿ ಎಲ್ಲಿ ಸ್ಪರ್ಧಿಸಬೇಕು ಎಂಬುದು ದೇವರ ಇಚ್ಛೆ. ನಿಖಿಲ್‌ ಕುಮಾರಸ್ವಾಮಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಬೇಕೊ? ಬೇಡವೊ? ಎಂಬುದನ್ನು ಕುಮಾರಸ್ವಾಮಿ ತೀರ್ಮಾನಿಸುತ್ತಾರೆ’ ಎಂದು ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.