ADVERTISEMENT

ಮಿಣಿ ಮಿಣಿ ಪೌಡರ್ ಟ್ರೋಲ್ ಹಿಂದೆ ಬಿಜೆಪಿ ವಿಕೃತಿ: ಎಚ್.ಡಿ. ಕುಮಾರಸ್ವಾಮಿ ಕಿಡಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 15:55 IST
Last Updated 27 ಜನವರಿ 2020, 15:55 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ರಾಮನಗರ: 'ಮಿಣಿ ಮಿಣಿ ಪೌಡರ್ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೆಲವರು ಸಾಮಾಜಿಕ‌ ಜಾಲತಾಣದಲ್ಲಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ಕಾರ್ಯಕರ್ತರ ವಿಕೃತಿ ಅಡಗಿದೆ' ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಮಂಗಳೂರು ಬಾಂಬ್ ಪ್ರಕರಣದಲ್ಲಿ ಮಾಧ್ಯಮಗಳ ವರದಿ ಆಧರಿಸಿ ಪಟಾಕಿ ಪೌಡರ್ ಕುರಿತು ನಾನು ಹೇಳಿಕೆ ನೀಡಿದ್ದೆ. ಈ ಪ್ರಕರಣದಲ್ಲಿ ಕೆಲವು ಹಿರಿಯ ಅಧಿಕಾರಿಗಳೇ ಮಾಧ್ಯಮಗಳ ದಾರಿ ತಪ್ಪಿಸಿದರು. ಸರ್ಕಾರ ಎಲ್ಲಿ ಬಿಗಿ ಮಾಡಬೇಕಿತ್ತೋ ಅಲ್ಲಿ ಮಾಡಲಿಲ್ಲ. ಪ್ರಕರಣದಲ್ಲಿ ಸರ್ಕಾರ, ಪೊಲೀಸರ ಲೋಪ ಮುಚ್ಚಿಕೊಳ್ಳಲು ಇಂತಹದ್ದಕ್ಕೆ ಪ್ರಚಾರ ನೀಡಲಾಯಿತು. ನಾನು ಕಥೆ ಕಟ್ಟಿಲ್ಲ. ಮಾಧ್ಯಮ ವರದಿ ಆಧರಿಸಿ ಹೇಳಿಕೆ ಕೊಟ್ಟಿದ್ದೇನೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ' ಎಂದರು.

'ದೊಡ್ಡ‌ ಕಂಟೈನರ್‌ನಲ್ಲಿ ಬಾಂಬ್ ಇದೆ. ಸಾವಿರಾರು ಜನ ಸಾಯುತ್ತಾರೆ ಎಂದಿದ್ದರು. ಒಂದು ಸಮಾಜದ ಬಗ್ಗೆ ದೋಷ ತೋರಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿ ಇತ್ತು. ಈಗ ತಾವೇ ಎಕ್ಸ್‌ಪೋಸ್ ಆಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಈ ಕಥೆಗಳನ್ನು ಕಟ್ಟುತ್ತಿದ್ದಾರೆ' ಎಂದು ದೂರಿದರು.

ADVERTISEMENT

ಯಕ್ಷಗಾನದಲ್ಲಿ ಮಿಣಿ ಮಿಣಿ ಪೌಡರ್‌

ಮಂಗಳೂರು: ಮಂಗಳೂರು ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿದ ‘ಮಿಣಿ ಮಿಣಿ ಪೌಡರ್’ ಪದ ಈಗ ಯಕ್ಷಗಾನದಲ್ಲೂ ಸದ್ದು ಮಾಡಿದೆ.

ಬಾಚಕೆರೆ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರಪಾಡಿ ಮೇಳದ ಪ್ರಸಂಗದಲ್ಲಿ ಕಲಾವಿದರೊಬ್ಬರು, ಹಾಸನದ ಕೂದಲಿಲ್ಲದ ಜ್ಯೋತಿಷಿಯೊಬ್ಬರು ಮಿಣಿ ಮಿಣಿ ಪುಡಿ ಕೊಟ್ಟಿದ್ದಾರೆ ಎನ್ನುವಾಗ ಪ್ರೇಕ್ಷಕರು ಹೋ ಎಂದು ನಕ್ಕಿದ್ದಾರೆ. ಯಕ್ಷಗಾನದ ಈ ದೃಶ್ಯವೀಗ ಸಾಕಷ್ಟು ವೈರಲ್ ಆಗುತ್ತಿದೆ.

ಕುಮಾರಸ್ವಾಮಿ ಈಚೆಗೆ ಮಾಧ್ಯಮಗಳ ಜತೆ ಮಾತನಾಡುತ್ತಾ ಬಾಂಬ್‌ನಲ್ಲಿ ಅದೆಂತದೋ ಮಿಣಿ ಮಿಣಿ ಪೌಡರ್ ಬಳಸಲಾಗಿತ್ತು ಎಂದಿದ್ದರು. ಈ ಪದವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.