
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ‘ಸಚಿವ ನಾಗೇಂದ್ರ ಅವರ ರಾಜೀನಾಮೆ ಮೊದಲೇ ಪಡೆಯಬೇಕಿತ್ತು. ರಾಜೀನಾಮೆ ಕೇಳಿಲ್ಲ ಎನ್ನುವುದು ಮುಖ ಉಳಿಸಿಕೊಳ್ಳಲು ಮುಖ್ಯಮಂತ್ರಿ ಮಾಡುತ್ತಿರುವ ನಾಟಕ. ಹಗರಣದ ಹಿಂದೆ ದೊಡ್ಡವರ ಪಾತ್ರ ಇರುವ ಕಾರಣಕ್ಕೇ ಸಚಿವರ ರಾಜೀನಾಮೆ ಕೇಳುವ ಧೈರ್ಯ ಅವರಿಗೆ ಇರಲಿಲ್ಲ’ ಎಂದು ಜೆಡಿಎಸ್ ಸಂಸದ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
‘ಕಳೆದ ಮಾರ್ಚ್‌ನಲ್ಲೇ ಹಗರಣ ನಡೆದಿದೆ. ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ. ಅಧಿಕಾರಿ ಸಾವಿನಿಂದ ಬಯಲಿಗೆ ಬಂದಿದೆ. ತೆಲಂಗಾಣ ಚುನಾವಣೆಗೆ ಹಣ ವರ್ಗಾವಣೆ ಆಗಿರುವ ಸಾಧ್ಯತೆ ಇದೆ. ಹಗರಣದ ಒಳಹೊಕ್ಕು ತನಿಖೆ ನಡೆಸಬೇಕು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ದೆಹಲಿಗೆ ಹೋಗಿ ಸಚಿವನಾಗುವುದಕ್ಕಿಂತ ರಾಜ್ಯದ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನಿಸುವೆ. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಕೇಂದ್ರ ಸರ್ಕಾರಕ್ಕೆ ಯಾವ ಮುಜುಗರವನ್ನೂ ನಾನು ಮಾಡುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇನೆ. ರಾಜ್ಯದ ಎಲ್ಲಾ ಸಂಸದರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ಈ ಕುರಿತು ಸಿ.ಪಿ.ಯೋಗೇಶ್ವರ್ ಜತೆ ಚರ್ಚಿಸಿದ ನಂತರ ತೀರ್ಮಾನ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಎರಡೂ ಕ್ಷೇತ್ರಗಳನ್ನು ಜೆಡಿಎಸ್ ಉಳಿಸಿಕೊಂಡಿದೆ. ಮೈತ್ರಿಯ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಅಹಂಕಾರ ಇಳಿಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.