ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ: ಚಕ್ರತೀರ್ಥ ಸಮಿತಿ ರದ್ದುಗೊಳಿಸಲು ವಿಶ್ವನಾಥ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2022, 18:41 IST
Last Updated 24 ಮೇ 2022, 18:41 IST
ಎಚ್. ವಿಶ್ವನಾಥ್ – ಪ್ರಜಾವಾಣಿ ಸಂಗ್ರಹ ಚಿತ್ರ
ಎಚ್. ವಿಶ್ವನಾಥ್ – ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ರದ್ದುಗೊಳಿಸಿ, ವರದಿಯನ್ನು ತಿರಸ್ಕರಿಸಬೇಕು’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಶಿಕ್ಷಣ ಪ್ರಜಾಪ್ರಭುತ್ವೀಕರಣ ಆಗಿರಬೇಕು. ಕೇಸರೀಕರಣ ಆಗಬಾರದು. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬಂದ ಹಾಗೆ ಮಾಡಲು ಬರುವುದಿಲ್ಲ. ಜಾತಿ, ಪಕ್ಷ, ಧರ್ಮದ ಆಧಾರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬಾರದು’ ಎಂದು ಹೇಳಿದರು.

‘ದೇವರು, ಧರ್ಮ, ಪೂಜೆ, ಯಜ್ಞದ ಬಗ್ಗೆ ತಂದೆ-ತಾಯಿ ಮನೆಯಲ್ಲಿ ಹೇಳಿಕೊಡಬೇಕು. ಸರ್ಕಾರ ಈ ಕೆಲಸ ಮಾಡಬಾರದು. ಪಠ್ಯಪುಸ್ತಕದ ಮೂಲಕ ಮಕ್ಕಳ ಮನಸ್ಸನ್ನು ಎಲ್ಲಿಯೋ ತೆಗೆದುಕೊಂಡು ಹೋಗಲಾಗುತ್ತಿದೆ. ಹೀಗೆ ಮಾಡಿದರೆ ಪಕ್ಷದ ಪ್ರಣಾಳಿಕೆಯನ್ನೂ ಪಠ್ಯಪುಸ್ತಕ ಮಾಡಬಹುದು’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಹಾಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿವಿಷಯ ತಜ್ಞರಿಲ್ಲ. ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಹೀಗಾಗಿ, ಎಲ್ಲ ಧರ್ಮ, ವರ್ಗಗಳನ್ನು ಪ್ರತಿನಿಧಿಸುವ ತಜ್ಞರನ್ನು ಒಳಗೊಂಡ ಸಮಿತಿಯನ್ನು ಹೊಸದಾಗಿ ರಚಿಸಬೇಕು.ಟಿಪ್ಪು ಸುಲ್ತಾನ್, ನಾರಾಯಣಗುರು ಅವರನ್ನು ಲಘುವಾಗಿ ಪರಿಗಣಸಬಾರದು. ಈ ನೆಲದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪಡೆದವರನ್ನು ಓದಬೇಕೇ, ಸೂಲಿಬೆಲೆ ಅವರನ್ನು ಓದಬೇಕೆ’ ಎಂದು ಪ್ರಶ್ನಿಸಿದರು.

‘ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು ಅವರನ್ನು ಗೇಲಿ ಮಾಡಿ ಪರಿಚಯ ಮಾಡಲಾಗಿದೆ. ಅದೇ ಬನ್ನಂಜೆ ಗೋವಿಂದಾಚಾರ್ಯಅವರ ಬಗ್ಗೆ ದೀರ್ಘ ಪರಿಚಯವಿದೆ. ರಾಜ್ಯದಲ್ಲಿ 35 ವಿಶ್ವವಿದ್ಯಾಲಗಳಿದ್ದರೂ ಯಾವುದೇ ವಿಶ್ವವಿದ್ಯಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸದಿರುವುದು ವಿಪರ್ಯಾಸ. ಕೆಲವು ಸಾಹಿತಿಗಳು, ಚಿಂತಕರು, ವಿಮರ್ಶಕರು ಈ ಬಗ್ಗೆ ಸುಮ್ಮನಿದ್ದಾರೆ. ಮಠಾಧಿಪತಿಗಳು ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.