ADVERTISEMENT

ಎಚ್‌1ಎನ್‌1 ಸೋಂಕಿಗೆ ಇಬ್ಬರು ಬಲಿ

192 ಮಂದಿಯಲ್ಲಿ ಸೋಂಕು ದೃಢ, ‘ಟಾಮಿಫ್ಲೂ’ ಮಾತ್ರೆ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 20:00 IST
Last Updated 25 ಫೆಬ್ರುವರಿ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್–19’ ಭೀತಿ ನಡುವೆಯೇ ರಾಜ್ಯದಲ್ಲಿ ಎಚ್‌1ಎನ್‌1 ಸೋಂಕು ಇಬ್ಬರನ್ನು ಬಲಿ ತೆಗೆದುಕೊಂಡಿದೆ.ತುಮಕೂರು ಹಾಗೂ ದಾವಣಗೆರೆಜಿಲ್ಲೆಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ.

ಕಳೆದ ವರ್ಷ ಈ ಸೋಂಕಿಗೆ 96 ಮಂದಿ ಮೃತಪಟ್ಟಿದ್ದರು. ಇದೀಗ ವರ್ಷಾರಂಭದಲ್ಲಿಯೇ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಈವರೆಗೂ 1,823 ಶಂಕಿತರ ಗಂಟಲಿನ ದ್ರವದ ಮಾದರಿ ಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ192 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ADVERTISEMENT

ಇಬ್ಬರು ಉದ್ಯೋಗಿಗಳಲ್ಲಿ ಈ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇಎಸ್‌ಎಪಿ (ಸ್ಯಾಪ್‌) ಇಂಡಿಯಾ ತಂತ್ರಾಂಶ ಕಂಪನಿಯು ತಾತ್ಕಾಲಿಕವಾಗಿ ಬೆಂಗ ಳೂರಿನ ಕಚೇರಿಗೆ ಬೀಗ ಹಾಕಿತ್ತು. ರಾಜ್ಯ ದಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ಬೆಂಗಳೂರಿಗರೇ ಹೆಚ್ಚು ಮಂದಿ (94) ಈ ಸೋಂಕಿಗೆ ಬಳಲಿದ್ದಾರೆ.

ಪ್ರಕರಣ ವರದಿಯಾದ ಜಿಲ್ಲೆ ಗಳು:ಉಡುಪಿ–46, ದಕ್ಷಿಣ ಕನ್ನಡ–13, ಬೆಂ. ಗ್ರಾಮಾಂತರ –7, ದಾವಣಗೆರೆ–7, ಶಿವಮೊಗ್ಗ–7, ಚಿಕ್ಕಮಗಳೂರು–4, ಬಳ್ಳಾರಿ–2, ಚಿತ್ರದುರ್ಗ–2, ಕೋಲಾರ–2, ಉತ್ತರ ಕನ್ನಡ–2, ತುಮಕೂರು–1, ಮೈಸೂರು–1, ಕೊಪ್ಪಳ–1, ಬೆಳಗಾವಿ–1

‘ಎಚ್1ಎನ್1 ಸೋಂಕು ದೃಢಪಟ್ಟ ಕೂಡಲೇ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಚಿಕಿತ್ಸೆ ಕುರಿತು ಸರ್ಕಾರಿ ವೈದ್ಯ ರಲ್ಲದೆ ಖಾಸಗಿ ವೈದ್ಯರಿಗೂ ಅಗತ್ಯ ತರಬೇತಿ ನೀಡಲಾಗುತ್ತಿದೆ. ಶೀಘ್ರ ರೋಗ ಪತ್ತೆ ಹಚ್ಚಿ, ಅಗತ್ಯ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ವಿಚಕ್ಷಣಾ ದಳಗಳನ್ನು ಬಲಪಡಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ‘ಟಾಮಿಫ್ಲೂ’ ಮಾತ್ರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ’ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಜಿ. ಪ್ರಕಾಶ್ ಕುಮಾರ್ ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣ ಕಡಿಮೆಯಿದೆ. ಅದರೂ ಎಚ್1ಎನ್1 ಸೋಂಕಿತರಿಗೆ ಸೂಕ್ತ ಚಿಕಿತ್ಸೆಗಾಗಿ ರಾಜ್ಯದ ಸರ್ಕಾರಿ ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ತಲಾ ₹ 50 ಸಾವಿರ ಹಣ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ರೋಗಿಗಳಿಗೆ ನೀಡಲು ಔಷಧಿ, ಮಾಸ್ಕ್‌ಗಳು ಖರೀದಿಸಲು ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.