ADVERTISEMENT

ಹೇರ್‌ ಸ್ಟ್ರೈಟ್ನಿಂಗ್‌ನಿಂದ ಉದುರಿದ ಕೂದಲು: ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರಿನ ಬ್ಯೂಟಿ ಪಾರ್ಲರ್‌ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 20:10 IST
Last Updated 2 ಸೆಪ್ಟೆಂಬರ್ 2018, 20:10 IST
ನೇಹಾ ಗಂಗಮ್ಮ
ನೇಹಾ ಗಂಗಮ್ಮ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಹೇರ್‌ ಸ್ಟ್ರೈಟ್ನಿಂಗ್‌ನಿಂದ ಕೂದಲು ಉದುರಿ ಮನನೊಂದ ವಿದ್ಯಾರ್ಥಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಣಿಕೊಪ್ಪಲು ಸಮೀಪದ ಬಾಳೆಲೆ ನಿಟ್ಟೂರು ಗ್ರಾಮದ ನೇಹಾ ಗಂಗಮ್ಮ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಗಾಂಡಂಗಡ ಪೆಮ್ಮಯ್ಯ ಅವರ ಪುತ್ರಿ ನೇಹಾ, ಮೈಸೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ‍ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಅಲ್ಲಿನ ಕೂರ್ಗ್ ಪಿ.ಜಿ.ಯಲ್ಲಿದ್ದ ಅವರು ಆ.28ರಂದು ಕಾಲೇಜಿಗೆ ಹೋಗುವುದಾಗಿ ತಿಳಿಸಿದ್ದರು. ಅಂದಿನಿಂದ ಯಾರ ಸುಳಿವಿಗೂ ಸಿಕ್ಕಿರಲಿಲ್ಲ.

ನೇಹಾ ಕಾಣೆಯಾದ ಬಗ್ಗೆ ಪಿ.ಜಿ. ಮಾಲೀಕ ಕಾರ್ಯಪ್ಪ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯವರೂ ಮೈಸೂರಿಗೆ ತೆರಳಿ ಹುಡುಕಾಟ ನಡೆಸಿದ್ದರು. ಆಕೆಯ ಸುಳಿವು ಸಿಕ್ಕಿರಲಿಲ್ಲ. ಶನಿವಾರ ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

ADVERTISEMENT

‘ನನ್ನ ಮಗಳು ಜುಲೈ 23ರಂದು ಮೈಸೂರಿನ ವಿ.ವಿ. ಮೊಹಲ್ಲಾದ ರೋಹಿಣಿ ಬ್ಯೂಟಿ ಪಾರ್ಲರ್‌ನಲ್ಲಿ ತಲೆಗೂದಲು ಕತ್ತರಿಸಿಕೊಂಡು, ಸ್ಟ್ರೈಟ್ನಿಂಗ್‌ ಮಾಡಿಸಿಕೊಂಡಿದ್ದಳು. ಅಂದಿನಿಂದ ಕೂದಲು ವಿಪರೀತ ಉದುರುತಿತ್ತು. ಬೇಸರಗೊಂಡು ನೋವು ತೋಡಿಕೊಳ್ಳುತ್ತಿದ್ದಳು’ ಎಂದು ಆಕೆಯ ತಂದೆ ಪೆಮ್ಮಯ್ಯ ದೂರಿದ್ದು, ಬ್ಯೂಟಿ ಪಾರ್ಲರ್‌ ವಿರುದ್ಧ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಕೂದಲು ಉದುರಲು ಆರಂಭಿಸಿದ ಮೇಲೆ ಬ್ಯೂಟಿ ಪಾರ್ಲರ್‌ಗೆಎರಡು ಭೇಟಿ ಮಾಡಿ ಸಿಬ್ಬಂದಿ ಜತೆಗೆ ಚರ್ಚಿಸಿದೆವು. ಕಾರಣ ತಿಳಿಸುವಂತೆ ಕೋರಿದ್ದೆವು. ಮನೆಗೆ ಬಂದಾಗಲೂ ತಲೆಯ ಕೂದಲು ಉದುರುವಿಕೆ ಬಗ್ಗೆಯೇ ಹೆಚ್ಚು ಚರ್ಚಿಸುತ್ತಿದ್ದಳು. ಕಾಲೇಜಿಗೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು.

ದೇವರ ದರ್ಶನಕ್ಕೆ ಧರ್ಮಸ್ಥಳಕ್ಕೆ ಕರೆದೊಯ್ಯುವಂತೆಯೂ ಹೇಳುತ್ತಿದ್ದಳು. ನೇಹಾಗೆ ಧೈರ್ಯ ತುಂಬಿ ಮೈಸೂರಿಗೆ ಕಳುಹಿಸಿದ್ದೆವು. ಅಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಸಂಬಂಧಿಕರು ಕಣ್ಣೀರು ಸುರಿಸಿದರು.

ಉಂಗುರದಿಂದ ಪತ್ತೆ: ಐದು ದಿನಗಳ ಬಳಿಕ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆಯಾಗಿದ್ದು ಕೊಳೆತ ಸ್ಥಿತಿಯಲ್ಲಿತ್ತು. ಕೈಯಲ್ಲಿದ್ದ ಉಂಗುರದಸಹಾಯದಿಂದ ಮೃತದೇಹವನ್ನು ಪೋಷಕರು ಪತ್ತೆ ಹಚ್ಚಿದರು ಎಂದು ಪೊಲೀಸರು ತಿಳಿಸಿದರು.

‘ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು’ ಎಂದು ಪಿಎಸ್‌ಐ ಮಹೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.