ADVERTISEMENT

ಇಂದಿನಿಂದ ಹಂಪಿಯಲ್ಲಿ ಧ್ವನಿ–ಬೆಳಕು ಕಾರ್ಯಕ್ರಮ ಪುನರಾರಂಭ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ನವೆಂಬರ್ 2022, 8:21 IST
Last Updated 1 ನವೆಂಬರ್ 2022, 8:21 IST
   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು ಮಂಗಳವಾರದಿಂದ (ನ.1) ಧ್ವನಿ–ಬೆಳಕಿನಲ್ಲಿ ಮಿಂದೇಳಲಿವೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಹಂಪಿ ಬೈ ನೈಟ್‌ಗೆ ಪುನಃ ಚಾಲನೆ ಕೊಡಲಾಗುತ್ತಿದೆ. ಇದಕ್ಕಾಗಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಧ್ವನಿ–ಬೆಳಕು ಕಾರ್ಯಕ್ರಮಕ್ಕೆ ಒಟ್ಟು 20 ಸ್ಮಾರಕಗಳನ್ನು ಆಯ್ಕೆ ಮಾಡಲಾಗಿದೆ. ಹಂಪಿ ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ, ಕಲ್ಲಿನ ರಥ, ಅದಕ್ಕೆ ಹೊಂದಿಕೊಂಡಿರುವ ಸಾಲು ಮಂಟಪಗಳು ಸೇರಿದಂತೆ ಇತರೆ ಸ್ಮಾರಕಗಳು ಬಣ್ಣದ ಬೆಳಕಿನಲ್ಲಿ ಮಿಂದೇಳಲಿವೆ.

16 ಸ್ಮಾರಕಗಳು ದೀಪಾಲಂಕಾರದಿಂದ ಕಂಗೊಳಿಸಲಿವೆ. ಎರಡು ಸ್ಮಾರಕಗಳ ಬಳಿ ಆಡಿಯೋ ಮತ್ತು ಡೈನಮಿಕ್‌ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು, ವಿರೂಪಾಕ್ಷ ದೇವಸ್ಥಾನ ಹಾಗೂ ವಿಜಯ ವಿಠಲ ಬಜಾರ್‌ನಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.

ಬೈ ನೈಟ್‌ ಏಕೆ?:
ವಿಜಯನಗರ ಜಿಲ್ಲೆಯಲ್ಲಿ ವರ್ಷದ ಹೆಚ್ಚಿನ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಿಸಿಲು ಇರುತ್ತದೆ. ಅದರಲ್ಲೂ ಹಂಪಿ ಪರಿಸರ ಬೆಟ್ಟ, ಗುಡ್ಡ, ಬಂಡೆಗಲ್ಲಿನಿಂದ ಕೂಡಿದ್ದು, ಅಧಿಕ ಶಾಖವಿರುತ್ತದೆ. ರಾತ್ರಿ ವೇಳೆ ಪ್ರವಾಸಿಗರು ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಈ ಯೋಜನೆ 2010ರಲ್ಲೇ ಜಾರಿಗೆ ತರಲಾಗಿತ್ತು. ಆದರೆ, ಒಂದಿಲ್ಲೊಂದು ಕಾರಣದಿಂದ ಕುಂಟುತ್ತ, ಏಳುತ್ತ ನಡೆದಿತ್ತು. ಕೋವಿಡ್‌ ಪ್ರಕರಣಗಳ ಸಂಖ್ಯೆ ತಗ್ಗಿದ ನಂತರ ಹಂಪಿ ಪ್ರಾಧಿಕಾರವು, ಇದನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಪುನಃ ಚಾಲನೆ ಕೊಡಲು ಮುಂದಾಗಿದೆ.

ADVERTISEMENT

18 ಸ್ಮಾರಕಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿರುತ್ತದೆ. ವಿರೂಪಾಕ್ಷ ದೇವಸ್ಥಾನದ ಎದುರು ಬಸವಣ್ಣ ಮಂಟಪ ಹಾಗೂ ವಿಠಲ ಬಜಾರ್‌ ಬಳಿ ಲೇಸರ್‌ ಶೋ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದ ಬಗೆಯನ್ನು ಅದರ ಮೂಲಕ ತೋರಿಸಿಕೊಡಲಾಗುತ್ತದೆ. ಈ ಯೋಜನೆಯ ಮೂಲಕ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ಕೊಡುವುದು ಪ್ರಾಧಿಕಾರದ ಉದ್ದೇಶ.

ಪ್ರವಾಸಿಗರ ನೆರವಿಗೆ ಕಿಯೊಸ್ಕ್‌ ಆರಂಭ
ಹೊರದೇಶ–ಹೊರರಾಜ್ಯದಿಂದ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಪ್ರವಾಸಿ ಮಂದಿರದ ಜಾಗದಲ್ಲಿ ಕಿಯೊಸ್ಕ್‌ ತೆರೆಯಲಾಗಿದೆ. ಹಂಪಿಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿ ಈ ಕಿಯೊಸ್ಕ್‌ನಲ್ಲಿ ಸಿಗಲಿದೆ. ‘ಹೊರಗಿನಿಂದ ಬರುವ ಪ್ರವಾಸಿಗರಿಗೆ ಅಗತ್ಯ ಮಾಹಿತಿ ಕೊಡುವುದಕ್ಕಾಗಿ ಕಿಯೊಸ್ಕ್‌ ತೆರೆಯಲಾಗಿದೆ. ಬ್ರೌಷರ್‌ ಕೂಡ ಮುದ್ರಿಸಲಾಗಿದ್ದು, ಅದರಲ್ಲಿ ಎಲ್ಲ ರೀತಿಯ ವಿವರ ಇರಲಿದೆ. ನ. 1ರಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಉದ್ಘಾಟಿಸುವರು’ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ತಿಳಿಸಿದರು.

ಹಂಪಿಯಲ್ಲಿ ಧ್ವನಿ–ಬೆಳಕು ಕಾರ್ಯಕ್ರಮಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನ. 1ರಂದು ಸಂಜೆ 7ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ಕೊಡುವರು.
–ಸಿದ್ದರಾಮೇಶ್ವರ, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.