ADVERTISEMENT

ಹಂಪಿ ಕನ್ನಡ ವಿ.ವಿ.ಯಲ್ಲಿ ನಿಯಮ ಉಲ್ಲಂಘಿಸಿ ಕಾಮಗಾರಿ

ಕಾನೂನುಬಾಹಿರವಾಗಿ ₹36 ಕೋಟಿ ಅನುದಾನ ಬಳಕೆ; ಉನ್ನತ ಶಿಕ್ಷಣ ಪರಿಷತ್ತಿನ ತನಿಖಾ ವರದಿಯಲ್ಲಿ ಪ್ರಸ್ತಾಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜುಲೈ 2019, 19:30 IST
Last Updated 3 ಜುಲೈ 2019, 19:30 IST
ಪ್ರೊ.ಸ.ಚಿ. ರಮೇಶ, ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ
ಪ್ರೊ.ಸ.ಚಿ. ರಮೇಶ, ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ: ಸರ್ಕಾರದ ನಿಯಮ ಉಲ್ಲಂಘಿಸಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ₹36 ಕೋಟಿ ವೆಚ್ಚ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಪರಿಷತ್ತಿನ ತನಿಖಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

2015ರ ಮೇ ನಿಂದ 2019ರ ಫೆಬ್ರುವರಿವರೆಗೆ ಈ ಕಾಮಗಾರಿಗಳು ನಡೆದಿದ್ದು, ಈ ಅವಧಿಯಲ್ಲಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು.

ನಿಯಮ ಉಲ್ಲಂಘಿಸಿ ಕಾಮಗಾರಿ ಕೈಗೆತ್ತಿಕೊಂಡು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ವಿಶ್ವವಿದ್ಯಾಲಯದ ಸೂಪರಿಟೆಂಡೆಂಟ್‌ ಎಚ್‌.ಎಂ. ಸೋಮನಾಥ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ಲೋಕಾಯುಕ್ತವು ಉನ್ನತ ಶಿಕ್ಷಣ ಪರಿಷತ್ತಿಗೆ ನೋಟಿಸ್‌ ಜಾರಿ ಮಾಡಿತ್ತು.

ADVERTISEMENT

ಪರಿಷತ್ತು, 2018ರ ಆಗಸ್ಟ್‌ನಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆಯ ಲೆಕ್ಕಾಧಿಕಾರಿಗಳಾದ ವಿಶ್ವನಾಥ್‌, ಎಲ್‌.ವಿ. ಉಮಾಪತಿ, ಪರಿಷತ್ತಿನ ಲೆಕ್ಕಾಧಿಕಾರಿ ಎಚ್‌.ಸಿ. ಜಯಪ್ರಕಾಶ್‌ ಮತ್ತು ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪರಶುರಾಮ ರೆಡ್ಡಿ ಅವರನ್ನು ಒಳಗೊಂಡ ಸಮಿತಿ ರಚಿಸಿತ್ತು. ಈ ಸಮಿತಿಯು 2018ರ ಆಗಸ್ಟ್‌ 27, 28ರಂದು ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ರೂಸಾ ಮತ್ತು ಇತರೆ ಅನುದಾನಗಳ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿ, ಅವುಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ತನಿಖಾ ವರದಿ ಸಲ್ಲಿಸಿದೆ.

ತನಿಖಾ ಸಮಿತಿ ವರದಿಯಲ್ಲಿ ಸಾಬೀತಾದಅಂಶಗಳು

* ಸರ್ಕಾರದ ಯಾವುದೇ ಇಲಾಖೆಯಾಗಲಿ, ಯಾವುದೇ ಕಾಮಗಾರಿಗಳನ್ನು ತುಂಡು ಗುತ್ತಿಗೆ ಮೂಲಕ ಕೆ.ಆರ್‌.ಐ.ಡಿ.ಎಲ್‌.ಗೆ ವಹಿಸಬಾರದು ಎಂಬ ಸರ್ಕಾರದ ಷರತ್ತು ಉಲ್ಲಂಘಿಸಲಾಗಿದೆ.

* ರೂಸಾ ಅನುದಾನದಲ್ಲಿ ₹86.26 ಲಕ್ಷವನ್ನು ಕೆ.ಟಿ.ಪಿ.ಪಿ. ಕಾಯ್ದೆ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ) ಉಲ್ಲಂಘಿಸಿ ತುಂಡುಗುತ್ತಿಗೆ ಮೂಲಕ ಖರ್ಚು ಮಾಡಿದ್ದನ್ನು ತಪಾಸಣಾ ಸಮಿತಿಯು ಒಪ್ಪದ ಕಾರಣ, ವಿಶ್ವವಿದ್ಯಾಲಯವು ತನ್ನ ಅಭಿವೃದ್ಧಿ ಅನುದಾನದಿಂದ ಆ ಹಣವನ್ನು ರೂಸಾ ಖಾತೆಗೆ ಹಿಂದಿರುಗಿಸಿದೆ. ಹಣ ವರ್ಗಾಯಿಸಿದ ಮಾತ್ರಕ್ಕೆ ಉಲ್ಲಂಘಿಸಿರುವ ನಿಯಮ ಕಾಯ್ದೆಬದ್ಧ ಆಗುವುದಿಲ್ಲ.

* ಭಾಷಾ ನಿಕಾಯ ಮತ್ತು ವಿಜ್ಞಾನ ನಿಕಾಯದ ತರಗತಿಗಳ ಕಟ್ಟಡಗಳ ಬಿಲ್ ಮತ್ತು ಎಂ.ಬಿ. ಪುಸ್ತಕಗಳನ್ನು ವಿಧಿಸಿದ್ದ ಷರತ್ತು ಅನ್ವಯ ಕೆ.ಆರ್‌.ಐ.ಡಿ.ಎಲ್‌. ಸಂಸ್ಥೆಯವರು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿಲ್ಲ. ಕಾರ್ಯಾದೇಶದ ಅನುಸಾರ ವಿಶ್ವವಿದ್ಯಾಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಬಿಲ್‍ಗಳ ನೈಜತೆ ಪರಿಶೀಲಿಸಿಲ್ಲ.

* ಲೋಕೋಪಯೋಗಿ ಇಲಾಖೆಯ ಆದೇಶವನ್ನು ಉಲ್ಲಂಘಿಸಿ, ಕ್ರಿಯಾಶಕ್ತಿ ಕಟ್ಟಡದ ವಿವಿಧ ಭಾಗಗಳಿಗೆ ಒಟ್ಟು 23 ಅಂದಾಜು ಕಾಮಗಾರಿಗಳನ್ನು ವಿಭಜಿಸಿ, ತುಂಡುಗುತ್ತಿಗೆ ಆಧಾರದ ಮೇಲೆ ವಹಿಸಿರುವುದು ಕಾನೂನುಬಾಹಿರವಾಗಿದೆ.

* ವಿಶ್ವವಿದ್ಯಾಲಯವು ತಾಂತ್ರಿಕ ವಿಭಾಗದ ಎಂಜಿನಿಯರ್‌ಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ವಿಫಲವಾಗಿದೆ. ವಿಶ್ವವಿದ್ಯಾಲಯದ ಎಂಜಿನಿಯರ್‌ಗಳ ಮೂಲಕ ಕಾಮಗಾರಿಗಳನ್ನು ನಿರ್ವಹಿಸದೆ ಅಂದಾಜಿನ ಮೊತ್ತದಲ್ಲಿ ಶೇ 8ರಷ್ಟು ಸೇವಾ ಶುಲ್ಕವನ್ನು ಕೆ.ಆರ್‌.ಐ.ಡಿ.ಎಲ್‌. ಸಂಸ್ಥೆಗೆ ನೀಡಿ, ಆರ್ಥಿಕ ನಷ್ಟ ಉಂಟು ಮಾಡಲಾಗಿದೆ.

* ಅವಧಿ ನಂತರ ಪೂರ್ಣಗೊಂಡ ಕಾಮಗಾರಿಗಳಿಗೆ ಗುತ್ತಿಗೆ ಒಪ್ಪಂದದ ಷರತ್ತಿನ ಅನ್ವಯ ಲಿಕ್ವಿಡಿಟಿ ಡ್ಯಾಮೇಜಸ್ ವಿಧಿಸಿಲ್ಲ. ಕಾಮಗಾರಿ ವಿಳಂಬಕ್ಕೆ ಕೆ.ಆರ್‌.ಐ.ಡಿ.ಎಲ್‌. ಸಂಸ್ಥೆಗೆ ದಂಡ ಹಾಕಿಲ್ಲ.

* ಲೋಕೋಪಯೋಗಿ ಇಲಾಖೆಯ ನಿಯಮದ ಪ್ರಕಾರ ಕಾರ್ಯಪಾಲಕ ಎಂಜಿನಿಯರ್‌ಗೆ ಸಿವಿಲ್ ಕಾಮಗಾರಿಗೆ ₹10 ಲಕ್ಷ ಮತ್ತು ವಿದ್ಯುತ್‌ ಶಕ್ತಿ ಕಾಮಗಾರಿಗೆ ₹1 ಲಕ್ಷದ ವರೆಗೆ ತಾಂತ್ರಿಕ ಪರಿಶೀಲನೆ ಮಾಡುವ ಅಧಿಕಾರವಿದೆ. ಆದರೆ, ಕೆ.ಆರ್‌.ಐ.ಡಿ.ಎಲ್‌. ಸಂಸ್ಥೆಯ ಕಾರ್ಯಪಾಲಕ ಎಂಜಿನಿಯರ್ ಗಳು ₹22.65 ಕೋಟಿ ಮೊತ್ತಕ್ಕೆ ಸಹಿ ಮಾಡಿ, ಆರ್ಥಿಕ ಯೋಜನೆಯ ನಿಯಮ ಉಲ್ಲಂಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.