ವಿಧಾನಸೌಧ
ಬೆಂಗಳೂರು: ಹಣದ ಕೊರತೆಯ ಕಾರಣ ಮುಚ್ಚುವ ಸ್ಥಿತಿಗೆ ಬಂದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಣತಜ್ಞ ವಿ.ಪಿ. ನಿರಂಜನಾರಾಧ್ಯ ಸೇರಿದಂತೆ ಹಲವು ಚಿಂತಕರು ಒತ್ತಾಯಿಸಿದ್ದಾರೆ.
ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ‘ಕರ್ನಾಟಕ’ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಮುಖ್ಯಮಂತ್ರಿ ಸೇರಿದಂತೆ ಅವರ ಸಂಪುಟದ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಸ್ಥಾಪನೆಯಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದೇ ತಾರತಮ್ಯ ಎಸಗಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುದಾನದ ಕೊರತೆಯಿಂದ ಸಿಬ್ಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ. ಸುಮಾರು 1,200 ವಿದ್ಯಾರ್ಥಿಗಳು ಓದುತ್ತಿರುವ ವಿಶ್ವವಿದ್ಯಾಲಯಕ್ಕೆ ತನ್ನ ಕನಿಷ್ಠ ವೆಚ್ಚವನ್ನು ಭರಿಸಲು ಅನುದಾನವಿಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದೆ. ಹಲವು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಒಂದು ವರ್ಷದಿಂದ ಹೊರಗುತ್ತಿಗೆ ನೌಕರರ ವೇತನವನ್ನೂ ಪಾವತಿಸಿಲ್ಲ ಎಂದು ದೂರಿದ್ದಾರೆ.
1991ರಲ್ಲಿ 700 ಎಕರೆಯಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗಳು, 22 ಸಂಶೋಧನಾ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿತ್ತು. ಭಾಷೆಯ ಬೆಳವಣಿಗೆಗೆ ಸಹಾಯ, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶ ಒದಗಿಸುವ ಮೂಲಕ ಸಾಮಾಜಿಕ ನ್ಯಾಯದ ಆಶಯಕ್ಕಾಗಿ ಸ್ಥಾಪಿಸಲಾಗಿದ್ದ ಇಂತಹ ವಿಶ್ವವಿದ್ಯಾಲಯ ಅವನತಿಯತ್ತ ಸಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ನೆರವು ನೀಡಬೇಕು ಎಂದು ಬಸವರಾಜ ಸೂಳಿಭಾವಿ, ಕೆ.ಪಿ. ಸುರೇಶ, ಸನತ್‌ಕುಮಾರ ಬೆಳಗಲಿ, ಡಾ.ಎಚ್.ಎಸ್. ಅನುಪಮಾ, ಹೇಮಾ ಪಟ್ಟಣಶೆಟ್ಟಿ, ದಾದಾಪೀರ್ ನವಿಲೇಹಾಳ್, ಶ್ರೀನಿವಾಸ ಕಕ್ಕಿಲಾಯ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.