ADVERTISEMENT

ಹಂಪಿ ಉತ್ಸವ: ಕೆಂಡದಂಥ ಬಿಸಿಲಲ್ಲೂ ಕುಗ್ಗದ ಉತ್ಸಾಹ

ಪಂಪಾ ಕ್ಷೇತ್ರಕ್ಕೆ ಹರಿದು ಬಂದ ಜನಸಾಗರ; ಉತ್ಸವ ಕಣ್ತುಂಬಿಕೊಳ್ಳುವ ತವಕ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಮಾರ್ಚ್ 2019, 5:30 IST
Last Updated 3 ಮಾರ್ಚ್ 2019, 5:30 IST
ಕೊಡೆಗಳನ್ನು ಹಿಡಿದುಕೊಂಡು ಹಂಪಿ ಉತ್ಸವದಲ್ಲಿ ಭಾಗಿಯಾದ ಪ್ರವಾಸಿಗರು – ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ
ಕೊಡೆಗಳನ್ನು ಹಿಡಿದುಕೊಂಡು ಹಂಪಿ ಉತ್ಸವದಲ್ಲಿ ಭಾಗಿಯಾದ ಪ್ರವಾಸಿಗರು – ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ   

ಹಂಪಿ: ಮಟ ಮಟ ಮಧ್ಯಾಹ್ನ, ಕೆಂಡಕಾರುತ್ತಿರುವ ಸೂರ್ಯ, ಕಾದು ಕಾವಲಿಯಂತಾದ ಬಂಡೆಗಲ್ಲುಗಳು, ನಿಂತಲ್ಲಿ ಕೂತಲ್ಲಿ ಬಿಸಿ ಗಾಳಿ, ಕೊತ ಕೊತ ಕುದಿಯುತ್ತಿರುವ ಸೆಕೆಯಿಂದ ತೊಯ್ದು, ಬಳಲಿ ಬೆಂಡಾದ ಜನ, ಒದ್ದೆಯಾದ ಧರಿಸಿದ ಬಟ್ಟೆಗಳು. ಹೀಗಿದ್ದರೂ ಜನರ ಉತ್ಸಾಹವೇನೂ ಕಡಿಮೆ ಆಗಿಲ್ಲ.

37ರಿಂದ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ನಡುವೆ ಹಂಪಿ ಪರಿಸರದಲ್ಲಿ ನಡೆಯುತ್ತಿರುವ ಹಂಪಿ ಉತ್ಸವದಲ್ಲಿ ಶನಿವಾರ ಕಂಡು ಬಂದ ದೃಶ್ಯಗಳಿವು.

ಉರಿಯುವ ಬಿಸಿಲಿನಲ್ಲಿ ಜನ ಉತ್ಸವಕ್ಕೆ ಬರುತ್ತಾರೋ ಇಲ್ಲವೋ ಎಂಬ ಆತಂಕ ಜಿಲ್ಲಾ ಆಡಳಿತವನ್ನು ಕಳೆದ ಕೆಲವು ದಿನಗಳಿಂದ ಕಾಡುತ್ತಿತ್ತು. ಆದರೆ, ಬೆಳಿಗ್ಗೆಯಿಂದ ಹಂಪಿ ಕಡೆ ನಿಧಾನವಾಗಿ ಜನ ಹೆಜ್ಜೆ ಹಾಕಿದರು. ಹೊತ್ತು ಏರುತ್ತಿದ್ದಂತೆ ಜನರ ಸಂಖ್ಯೆ ಹೆಚ್ಚಾಯಿತು. ಇದರಿಂದ ಅದರ ಚಿಂತೆ, ಆತಂಕ ದೂರಾಯಿತು. ಅನೇಕ ದಿನಗಳಿಂದ ಬೆವರು ಹರಿಸಿ,ಉತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಸಂಘಟಕರ ಮುಖಭಾವದಲ್ಲಿ ಧನ್ಯತೆಯ ಭಾವ ಮೂಡಿತ್ತು.

ADVERTISEMENT

ಬಿಸಿಲನ್ನೂ ಲೆಕ್ಕಿಸದೆ ಸ್ಥಳೀಯರು ಹಾಗೂ ಹೊರಗಿನಿಂದ ಬಂದ ಪ್ರವಾಸಿಗರು ಹಂಪಿ ಪರಿಸರದಲ್ಲಿ ಓಡಾಡಿ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ನಂತರ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ವಸ್ತು ಪ್ರದರ್ಶನ, ಕೃಷಿ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಕಲಾಕೃತಿಗಳ ಪ್ರದರ್ಶನ ಕಣ್ತುಂಬಿಕೊಂಡರು.

ಜಾನಪದ ವಿಶ್ವವಿದ್ಯಾಲಯದಿಂದ ವಿಶೇಷವಾಗಿ ತರಿಸಿರುವ, ಉಳುಮೆ ಮಾಡುತ್ತಿರುವ ನಟ ರಾಜಕುಮಾರ ಅವರ ಪುತ್ಥಳಿ, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಣ್ಣಿನ ಮೂರ್ತಿಗಳನ್ನು ನೋಡಿ ಜನ ಖುಷಿಪಟ್ಟರು. ಮೊಬೈಲ್‌ನಲ್ಲಿ ಛಾಯಾಚಿತ್ರ, ಸೆಲ್ಫಿತೆಗೆದುಕೊಂಡು ಸಂಭ್ರಮಿಸಿದರು. ವಾಲಿಬಾಲ್‌, ಕುಸ್ತಿ, ಕಬಡ್ಡಿ ನೋಡಿ ಖುಷಿಪಟ್ಟರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡೇ ಹೋಗಬೇಕೆಂದು ನಿಶ್ಚಯಿಸಿದ್ದ ಜನ ಮಧ್ಯಾಹ್ನ ಆಹಾರ ಉತ್ಸವದಲ್ಲಿ ಭಾಗಿಯಾಗಿ, ಅಲ್ಲಿನ ಮಳಿಗೆಗಳಲ್ಲಿ ತರಹೇವಾರಿ ಖಾದ್ಯಗಳನ್ನು ಸವಿದರು. ಐಸ್‌ಕ್ರೀಂ, ಎಳನೀರು, ತಂಪು ಪಾನೀಯ, ಹಣ್ಣಿನ ರಸವನ್ನು ಸವಿದರು. ನಂತರ ಸ್ಮಾರಕಗಳು, ಮಂಟಪಗಳು ಹಾಗೂ ಕಲ್ಲು ಬಂಡೆಗಳ ನೆರಳಿನಡಿಯಲ್ಲಿ ಕುಳಿತುಕೊಂಡು ವಿಶ್ರಾಂತಿ ಪಡೆದರು. ಕುಟುಂಬ ಸದಸ್ಯರು, ಗೆಳೆಯರೊಂದಿಗೆ ಹರಟಿದರು. ಈ ವೇಳೆ ಕೆಲವರು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

‘ಬಳ್ಳಾರಿ ಎಂದರೆ ಬಿಸಿಲು, ಬಿಸಿಲು ಎಂದರೆ ಬಳ್ಳಾರಿ. ಆದರೆ, ಪ್ರತಿ ವರ್ಷ ನವೆಂಬರ್‌ನಲ್ಲಿ ಉತ್ಸವ ಆಯೋಜಿಸುತ್ತಿದ್ದರು. ಈ ಸಲ ಲೋಕಸಭೆ ಉಪಚುನಾವಣೆ ಬಂದದ್ದರಿಂದ ಅನಿವಾರ್ಯವಾಗಿ ಮುಂದೂಡಿ, ಈಗ ಸಂಘಟಿಸಿದ್ದಾರೆ. ಬೇಸಿಗೆ ಇರುವುದರಿಂದ ಸಹಜವಾಗಿ ಬಿಸಿಲು ಇರುತ್ತದೆ. ಅದಕ್ಕಾಗಿ ಎರಡೇ ದಿನ ಉತ್ಸವ ಸಂಘಟಿಸಿದ್ದಾರೆ. ಎರಡು ದಿನ ಬಿಸಿಲಿನಲ್ಲಿ ಓಡಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಇದೊಂದು ಭಿನ್ನ ಅನುಭವ’ ಎಂದು ಸಿಂಧನೂರಿನ ನಿವಾಸಿ ರವಿ ಹೇಳಿದರು.

‘ಅನೇಕ ಜನರು ಹಲವು ದಿನಗಳಿಂದ ಬಿಸಿಲಿನಲ್ಲಿ ಶ್ರಮ ವಹಿಸಿ ಕಾರ್ಯಕ್ರಮ ಸಂಘಟಿಸಿದ್ದಾರೆ. ನಿಜವಾಗಿ ತೊಂದರೆ ಅನುಭವಿಸಿದ್ದು ಅವರು. ನಾವು ನೋಡಲಷ್ಟೇ ಬಂದಿದ್ದೇವೆ. ನನ್ನ ಪ್ರಕಾರ, ಹೇಳುವುದಾದರೆ, ಬಿಸಿಲು ಸಮಸ್ಯೆಯೇ ಅಲ್ಲ. ಬೇರೆ ದೇಶಗಳಿಂದ ವಿದೇಶಿಯರು ಇಲ್ಲಿಗೆ ಬರುತ್ತಾರೆ. ಹೀಗಿರುವಾಗ ಇಲ್ಲಿ ಹುಟ್ಟಿರುವ ನಾವು ಬಿಸಿಲಿಗೇಕೆ ಹೆದರಬೇಕು’ ಎಂದು ಪ್ರಶ್ನಿಸಿದರು ಚಿತ್ರದುರ್ಗದ ಬಸವಶ್ರೀ.

*
ಮೊದಲ ಸಲ ಹಂಪಿ ಉತ್ಸವಕ್ಕೆ ಬಂದಿದ್ದೇನೆ. ನೋಡಿ ಬಹಳ ಖುಷಿಯಾಗುತ್ತಿದೆ. ಎರಡು ದಿನ ಬಿಸಿಲಲ್ಲಿ ಓಡಾಡಿ ನೋಡಲು ಯಾವುದೇ ತೊಂದರೆ ಇಲ್ಲ.
-ಉಮಾ, ಮುನಿರಾಬಾದ್‌ ನಿವಾಸಿ

*
ಪ್ರತಿ ವರ್ಷ ನವೆಂಬರ್‌ನಲ್ಲಿ ಕಾರ್ಯಕ್ರಮ ಸಂಘಟಿಸುತ್ತಿದ್ದರು. ಈ ಸಲ ಬೇಸಿಗೆಯಲ್ಲಿ ಮಾಡುತ್ತಿದ್ದಾರೆ. ಆದರೆ ನಮ್ಮೂರು ಹಬ್ಬ ಆಗಿರುವುದರಿಂದ ಯಶಸ್ವಿಗೊಳಿಸಬೇಕು.
-ಜ್ಯೋತಿ, ಕಂಪ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.