ADVERTISEMENT

ಅಕ್ಕಸಾಲಿಗರಿಗೆ ಕಿರುಕುಳ: ಕಳವಳ

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಪಾಲನೆ ಕಡ್ಡಾಯ: ಗೃಹಸಚಿವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:30 IST
Last Updated 18 ಡಿಸೆಂಬರ್ 2018, 19:30 IST

ಬೆಳಗಾವಿ: ಕಳವಾದ ಒಡವೆಗಳನ್ನು ಜಪ್ತಿ ಮಾಡುವ ನೆಪದಲ್ಲಿ ಪೊಲೀಸರು ಚಿನ್ನ– ಬೆಳ್ಳಿ ಕೆಲಸಗಾರರಿಗೆ ಕಿರುಕುಳ ನೀಡುವಂತಿಲ್ಲ. ವಿಚಾರಣೆಗೆ ಅವರನ್ನು ಕರೆದೊಯ್ಯುವಾಗ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಕೆ.ಪಿ.ನಂಜುಂಡಿ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ಚಿನ್ನ–ಬೆಳ್ಳಿ ಕೆಲಸಗಾರರ ವಿಚಾರಣೆಗೆ ಹೋಗುವಾಗ ಪೊಲೀಸರು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಸಾಕ್ಷ್ಯಾಧಾರವಿದ್ದರೆ ಮಾತ್ರ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅನವಶ್ಯವಾಗಿ ಠಾಣೆಗೆ ಕರೆಸಿಕೊಂಡು ಲಾಕಪ್‌ನಲ್ಲಿ ಇರಿಸಬಾರದು. ಕಳವಾದ ಸ್ವತ್ತು ವಶಕ್ಕೆ ಪಡೆಯುವಾಗಲೂ ಚಿನ್ನ–ಬೆಳ್ಳಿ ಕೆಲಸಗಾರರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲೇ ಪಂಚ ನಾಮೆ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ’ ಎಂದರು.

‘ಕಳವು ಮಾಲು ಎಂಬ ಅರಿವಿದ್ದೂ ಅದನ್ನು ಖರೀದಿಸಿದ್ದರೆ ಮಾತ್ರ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಕಾನೂನು ಮೀರಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದೂ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.