
ಮಾಲೂರು (ಕೋಲಾರ): ರಾಜ್ಯ ಸರ್ಕಾರ ನೀಡಿದ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ನೀಡಿದ ಪ್ರಶಸ್ತಿ, ಫಲಕಗಳನ್ನು ಸಾಹಿತಿ ಹಾಗೂ ಪುಸ್ತಕಮನೆ ಹರಿಹರಪ್ರಿಯ ಸುಟ್ಟು ಹಾಕಿದ್ದಾರೆ.
ನಗರದ ಹೊರವಲಯದಲ್ಲಿರುವ ತಮ್ಮ ಪುಸ್ತಕಮನೆಯ ಎದುರು ಬುಧವಾರ ಪ್ರಶಸ್ತಿಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ ನೆರವಿಗೆ ಯಾರೂ ಬಂದಿಲ್ಲ ಹಾಗೂ ಹಣಕಾಸು ನೆರವು ನೀಡಿಲ್ಲ. ತಮ್ಮನ್ನು ತಿರಸ್ಕಾರ ಭಾವದಿಂದ ಕಾಣಲಾಗುತ್ತಿದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
‘ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪ ಹೆಸರಿನ ಪ್ರಶಸ್ತಿ, ಸಿದ್ಧಯ್ಯ ಪುರಾಣಿಕರ ಹೆಸರಲ್ಲಿರುವ ಕಾವ್ಯಾನಂದ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ, ಗೌರವ ಡಾಕ್ಟರೇಟ್ ಸೇರಿದಂತೆ ಎಲ್ಲಾ ಪ್ರಶಸ್ತಿಗಳನ್ನು ಸುಟ್ಟು ಹಾಕಿದ್ದೇನೆ. ನನಗೆ ಈ ಪ್ರಶಸ್ತಿಗಳ ನೆನಪು ಮತ್ತೆ ಬರಬಾರದೆಂದು ಈ ರೀತಿ ಮಾಡಿದ್ದೇನೆ’ ಎಂದು ಹರಿಹರಪ್ರಿಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೃದಯಾಘಾತವಾಗಿ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನನಗೆ ಎರಡು ಸ್ಟೆಂಟ್ ಹಾಕಿದ್ದಾರೆ. ವೈದ್ಯಕೀಯ ವೆಚ್ಚ ನೀಡುವಂತೆ ಸರ್ಕಾರವನ್ನು ಕೋರಿದ್ದು, ಈವರೆಗೆ ಲಭಿಸಿಲ್ಲ. ಆಸ್ಪತ್ರೆಗೆ ಪಾವತಿಸಿದ್ದ ₹4.50 ಲಕ್ಷ ನನಗೆ ತುರ್ತಾಗಿ ಬೇಕಿದೆ. ಇತರರ ಬಳಿ ಪಡೆದು ಅಂದು ಪಾವತಿಸಿದ್ದೆ. ನನಗೆ ಒಂದು ಮನೆ ಬೇಕು, ಪುಸ್ತಕ ಇಡಲು ವ್ಯವಸ್ಥೆ ಮಾಡಿಕೊಡಬೇಕು. ಜೊತೆಗೆ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಈ ವಿಚಾರ ಮುಖ್ಯಮಂತ್ರಿಗೆ ಮಾತ್ರವಲ್ಲ, ಪ್ರಧಾನಿಗೂ ಗೊತ್ತಾಗಬೇಕು. ಆ ಮೂಲಕ ನನಗೆ ಸಹಾಯ ಮಾಡಬೇಕು ಎಂದು ಅವರು ಕೋರಿದರು.

ನನ್ನ ಮಾತಿಗೆ ಕಿಂಚಿತ್ ಬೆಲೆ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಈ ಪ್ರಶಸ್ತಿ ಇಟ್ಟುಕೊಂಡು ಏನು ಪ್ರಯೋಜನ? ಯಾರಿಗೆ ತೋರಿಸಲಿ? ಕಣ್ಣೆದುರು ಇರಬಾರದೆಂದು ಸುಟ್ಟು ಹಾಕಿದ್ದೇನೆ.–ಹರಿಹರಪ್ರಿಯ, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.