ADVERTISEMENT

19 ತಿಂಗಳ ಅಜ್ಞಾತವಾಸಕ್ಕೆ ಮುಕ್ತಿ; ಸೌದಿಯಿಂದ ಬೆಂಗಳೂರಿಗೆ ಬಂದಿಳಿದ ಹರೀಶ್ ಬಂಗೇರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 21:12 IST
Last Updated 18 ಆಗಸ್ಟ್ 2021, 21:12 IST
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಬಂದಿಳಿದ ಹರೀಶ ಬಂಗೇರ ಅವರನ್ನು ಪತ್ನಿ ಸುಮನ, ಪುತ್ರಿ ಹನಿಷ್ಕಾ ಹಾಗೂ ಸ್ನೇಹಿತ ಲೋಕೇಶ್ ಅಂಕದಕಟ್ಟೆ ಬರಮಾಡಿಕೊಂಡರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಬಂದಿಳಿದ ಹರೀಶ ಬಂಗೇರ ಅವರನ್ನು ಪತ್ನಿ ಸುಮನ, ಪುತ್ರಿ ಹನಿಷ್ಕಾ ಹಾಗೂ ಸ್ನೇಹಿತ ಲೋಕೇಶ್ ಅಂಕದಕಟ್ಟೆ ಬರಮಾಡಿಕೊಂಡರು.   

ಕುಂದಾಪುರ: ಫೇಸ್‌ಬುಕ್‌ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಗಳ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿ, ಎಂಟು ತಿಂಗಳ ಬಳಿಕ ಬಿಡುಗಡೆಯಾಗಿದ್ದ ತಾಲ್ಲೂಕಿನ ಬೀಜಾಡಿ ಗೋಯಾಡಿ ಬೆಟ್ಟು ಹರೀಶ್ ಬಂಗೇರ ಬುಧವಾರ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಬಂದಿಳಿದರು.

‌ಬೆಂಗಳೂರಿಗೆ ತೆರಳಿದ ಅವರ ಪತ್ನಿ ಸುಮನಾ, ಪುತ್ರಿ ಹನಿಷ್ಕಾ ಹಾಗೂ ಸ್ನೇಹಿತ ಲೋಕೇಶ್ ಅಂಕದಕಟ್ಟೆ, ಆನಂದಭಾಷ್ಪದೊಂದಿಗೆ ಬರಮಾಡಿಕೊಂಡರು.

ಘಟನೆ ವಿವರ :
ಹರೀಶ್‌ ಬಂಗೇರ ಅವರು ಸೌದಿ ಅರೇಬಿಯಾದ ಕಾರ್ಟನ್ ಬಾಕ್ಸ್‌ ತಯಾರಿಕಾ ಕಾರ್ಖಾನೆಯೊಂದರಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಫೇಸ್‌ಬುಕ್‌ನಲ್ಲಿ ಇವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಕಿಡಿಗೇಡಿಗಳು, ಆ ಖಾತೆಯ ಮೂಲಕ ಸೌದಿ ಅರೇಬಿಯಾ ದೊರೆಯ ವಿರುದ್ಧ ಪೋಸ್ಟ್‌ ಮಾಡಿದ್ದರು. ಇದಾದ ನಂತರ ಸೌದಿ ಪೊಲೀಸರು ಬಂಗೇರ ಅವರನ್ನು 2019ರ ಡಿಸೆಂಬರ್‌ 22ರಂದು ಬಂಧಿಸಿದ್ದರು.

ADVERTISEMENT

‘ನನ್ನ ಪತಿಯನ್ನು ಈ‌ ಪ್ರಕರಣದಲ್ಲಿ‌ ಸಿಲುಕಿಸಲಾಗಿದೆ’ ಎಂದುಪತ್ನಿ ಸುಮನಾ ಮಾಧ್ಯಮಗಳಿಗೆ‌ ಮಾಹಿತಿ‌ ನೀಡಿ, ಪತಿಯ ಬಿಡುಗಡೆಗೆ ನೆರವಾಗುವಂತೆ ಮನವಿ ಮಾಡಿದ್ದರು. ಕುಟುಂಬ ಸ್ನೇಹಿತ ಲೋಕೇಶ್ ಅಂಕದಕಟ್ಟೆ, ಇತರ ಸ್ನೇಹಿತರೊಂದಿಗೆ ಸೇರಿ ಬಂಗೇರ ಅವರ ಬಿಡುಗಡೆಗಾಗಿ ನಿರಂತರ ಪ್ರಯತ್ನ ನಡೆಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ‌ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ‌ಮತ್ತಿತರರು ಪ್ರಕರಣದ ಸಮಗ್ರ ತನಿಖೆಗೆ ಒತ್ತಡ ಹೇರಿದ್ದರು.

ಎಸ್ಪಿ ನಿಶಾ ಜೇಮ್ಸ್ ಹಾಗೂ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ್ದ ಉಡುಪಿ ಪೊಲೀಸರು, ನಕಲಿ ಖಾತೆ ಸೃಷ್ಟಿಸಿ, ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮೂಡಬಿದಿರೆಯ ಅಬ್ದುಲ್ ಹುಯೇಜ್ ಹಾಗೂ ಅಬ್ದುಲ್ ತುಯೇಜ್ ಎಂಬುವರನ್ನು ಬಂಧಿಸಿದ್ದರು.

ಆ ಬಳಿಕ, ಉಡುಪಿ ಪೊಲೀಸರು ಭಾರತೀಯ ರಾಯಭಾರ ಕಚೇರಿ ಮೂಲಕ, ಸೌದಿ ಸರ್ಕಾರಕ್ಕೆ ಮಾಹಿತಿ ತಲುಪಿಸಿ, ಬಂಗೇರ ಬಿಡುಗಡೆಗೆ ಮನವಿ ಮಾಡಿದ್ದರು. ಈ ಹಂತದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಕಮಲಪಂತ್, ಉಡುಪಿಯ ಸಾಮಾಜಿಕ ಹೋರಾಟಗಾರ ಡಾ.ಬಿ. ರವೀಂದ್ರನಾಥ ಶ್ಯಾನುಭಾಗ್, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ರಾಜತಾಂತ್ರಿಕ ಅಧಿಕಾರಿಗಳಾದ ದೇಶ್‌ಬಂಧು ಬಟ್ಟಿ ಹಾಗೂ ಸುನೀಲ್ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.