ADVERTISEMENT

ಹಾಸನಾಂಬ ಜಾತ್ರೆ: ವಿಐಪಿ ಸಂಸ್ಕೃತಿಗೆ ತೆರೆ; ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 16:13 IST
Last Updated 6 ಅಕ್ಟೋಬರ್ 2025, 16:13 IST
 ಕೃಷ್ಣ ಬೈರೇಗೌಡ 
 ಕೃಷ್ಣ ಬೈರೇಗೌಡ    

ಬೆಂಗಳೂರು: ಇದೇ 9 ರಿಂದ 23ರವರೆಗೆ ನಡೆಯುವ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಜನಸ್ನೇಹಿ ಉತ್ಸವವಾಗಿ ನಡೆಸಲಾಗುವುದು ಮತ್ತು ವಿಐಪಿ ಸಂಪ್ರದಾಯಕ್ಕೆ ತೆರೆ ಎಳೆಯಲಾಗುವುದು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಸೋಮವಾರ ಹಾಸನ ಜಿಲ್ಲಾ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಬಳಿಕ ಅವರು ಸುದ್ದಿಗಾರರಿಗೆ ವಿವರ ನೀಡಿದರು.

ಹಾಸನಾಂಬ ಉತ್ಸವದಲ್ಲಿ ವಿಐಪಿ ಸಂಸ್ಕೃತಿಯಿಂದ ಸ್ಥಳೀಯರು ಬೇಸತ್ತಿದ್ದರು. ಈ ವರ್ಷದಿಂದ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು. ಕಳೆದ ವರ್ಷ ಹಾಸನದಲ್ಲಿ ವಿಐಪಿಗಳ ಎಸ್ಕಾರ್ಟ್‌ಗಳದ್ದೇ ಸದ್ದು ಹೆಚ್ಚಾಗಿತ್ತು. ಆದರೆ ಈ ವರ್ಷ ಅದಕ್ಕೆ ಅವಕಾಶವಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಮಾಜಿ ಪ್ರಧಾನಿಯವರಿಗೆ ಮಾತ್ರ ಎಸ್ಕಾರ್ಟ್‌ ವ್ಯವಸ್ಥೆ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಶಾಸಕರು, ಸಚಿವರು, ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿ ಉಳಿದ ಗಣ್ಯ ವ್ಯಕ್ತಿಗಳು ತಾವು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಇ–ಮೇಲ್‌ ಅಥವಾ ಫೋನ್‌ ಕರೆ ಮೂಲಕ ಮೊದಲೇ ತಿಳಿಸಬೇಕು. ಮಾಹಿತಿ ನೀಡುವ ಗಣ್ಯ ವ್ಯಕ್ತಿಗಳನ್ನು ಜಿಲ್ಲಾಡಳಿತ ನಿಯೋಜಿಸುವ ವಾಹನದಲ್ಲಿ ದೇವಾಲಯಕ್ಕೆ ಕರೆ ತಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಗಣ್ಯ ವ್ಯಕ್ತಿಗಳಿಗೆ ತಮ್ಮ ಕುಟುಂಬದ ನಾಲ್ಕು ಜನ ಸದಸ್ಯರನ್ನು ಜತೆಗೆ ಕರೆತರಲು ಅವಕಾಶ ನೀಡಲಾಗಿದೆ. ಆದರೆ, ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ಆಗಮಿಸಲು ಅವಕಾಶವಿಲ್ಲ ಎಂದರು.

25 ಲಕ್ಷ ಜನ ನಿರೀಕ್ಷೆ: ಹಾಸನಾಂಬ ದೇವಾಲಯಕ್ಕೆ ಈ ವರ್ಷ 25 ಲಕ್ಷ ಜನ ಬರುವ ನಿರೀಕ್ಷೆ ಇದೆ. 2021 ರಲ್ಲಿ 1 ಲಕ್ಷ, 2022 ರಲ್ಲಿ 3 ಲಕ್ಷ, 2023 ರಲ್ಲಿ 6 ಲಕ್ಷ ಮತ್ತು 2024 ರಲ್ಲಿ 20 ಲಕ್ಷ ಭಕ್ತರು ಬಂದಿದ್ದರು. ಈ ಬಾರಿ ಹೆಚ್ಚು ಜನ ಬರುವ ಸಾಧ್ಯತೆ ಇರುವುದರಿಂದ ಎಲ್ಲಾ ಇಲಾಖೆಗಳನ್ನು ಒಳಗೊಂಡು ಸುಗಮ ತಯಾರಿಗೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಜನ ಸಂದಣಿ ನಿಯಂತ್ರಿಸುವ ಸಲುವಾಗಿ 2,000 ಪೊಲೀಸರನ್ನು ನೇಮಕ ಮಾಡಲಾಗಿದೆ. 280ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಡ್ರೋನ್‌ ಕ್ಯಾಮೆರಾ ಸಹ ಬಳಸಲಾಗುವುದು. ಎಲ್ಲದಕ್ಕೂ ಎಐ ತಂತ್ರಜ್ಞಾನ ಬಳಸಲಾಗಿದೆ. ಸ್ಥಳದಲ್ಲೇ ನಿಯಂತ್ರಣ ಕೊಠಡಿ ನಿರ್ಮಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂದು ಅವರು ಹೇಳಿದರು.

ದೇವರ ದರ್ಶನಕ್ಕೆ ₹1000 ಪಾಸ್‌

ದೇವರ ದರ್ಶನಕ್ಕೆ ₹1000 ಮತ್ತು ₹300ರ ಪಾಸ್‌ಗಳನ್ನು ವಿತರಿಸಲಾಗುವುದು. ಪಾಸ್‌ ಪಡೆದವರಿಗೆ ದೇವರ ದರ್ಶನದ ಜತೆಗೆ ಪ್ರಸಾದವನ್ನೂ ನೀಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು. ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ಅವಕಾಶ ಇರಲಿದೆ. ಎಸ್ಕಾರ್ಟ್‌ನಲ್ಲಿ ಬರುವವರಿಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಅವಕಾಶ ಇರಲಿದೆ. ಪಾಸ್‌ ‍ಪಡೆದವರಿಗೆ ಬೆಳಿಗ್ಗೆ 7.30ರಿಂದ 10ರ ಅವಧಿಯಲ್ಲಿ ಪ್ರವೇಶ ನೀಡಲಾಗುವುದು. ಒಂದು ದಿನಕ್ಕೆ 1000 ಪಾಸ್‌ಗಳನ್ನು ಮಾತ್ರ ವಿತರಿಸಲಾಗುವುದು. ಸಮಯ ಮೀರಿ ಬಂದವರಿಗೆ ಅವಕಾಶ ಇರುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.