ADVERTISEMENT

ವಿರೋಧದ ಮಧ್ಯೆ ‘ದ್ವೇಷ ಭಾಷಣ’ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:30 IST
Last Updated 19 ಡಿಸೆಂಬರ್ 2025, 15:30 IST
ಬೆಳಗಾವಿ ಸುವರ್ಣ ವಿಧಾನಸೌಧ
ಬೆಳಗಾವಿ ಸುವರ್ಣ ವಿಧಾನಸೌಧ   

ಸುವರ್ಣ ವಿಧಾನಸೌಧ (ಬೆಳಗಾವಿ): ವಿರೋಧ ಪಕ್ಷಗಳ ಸದಸ್ಯರ ತೀವ್ರ ಆಕ್ರೋಶ, ಗದ್ದಲ ಮಧ್ಯೆಯೇ, ದ್ವೇಷಭಾಷಣ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುವ ಮಸೂದೆಗೆ ವಿಧಾನಪರಿಷತ್ತಿನಲ್ಲಿ ಸರ್ಕಾರ ಶುಕ್ರವಾರ ಅಂಗೀಕಾರ ಪಡೆಯಿತು. 

‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯನ್ನು ವಿಧಾನಪರಿಷತ್‌ನಲ್ಲಿ ಪರ್ಯಾಲೋಚನೆಗೆ ಮಂಡಿಸಿದಾಗ, ಬಿಜೆಪಿ–ಜೆಡಿಎಸ್ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ, ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಸೂದೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ಸಿ.ಟಿ.ರವಿ, ‘ದ್ವೇಷ ಭಾಷಣದ ಹೆಸರಲ್ಲಿ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ನನ್ನನ್ನೇ ಜೈಲಿಗೆ ಹಾಕುವ ಪ್ರಯತ್ನ ಮಾಡಿದ್ದರು. ಇನ್ನು ಮಸೂದೆ ಬಂದರೆ ತಮ್ಮ ವಿರುದ್ಧ ಟೀಕೆ ಮಾಡಿದವರನ್ನು ಬಂಧಿಸುವ ಕೆಲಸ ಮಾಡುತ್ತಾರೆ’ ಎಂದು ದೂರಿದರು.

ADVERTISEMENT

‘ಒಂದು ಧರ್ಮದಲ್ಲಿ, ದೇವರನ್ನು ನಂಬದವರನ್ನು ಕಾಫೀರರು ಎನ್ನುತ್ತಾರೆ. ಅವರನ್ನು ಕೊಲ್ಲಬೇಕು ಎಂದಿದೆ. ಈ ವಿಚಾರದ ಬಗ್ಗೆ ಮಾತನಾಡಿದರೂ, ದ್ವೇಷಭಾಷಣ ಎಂದು ಜೈಲಿಗೆ ಹಾಕಲು ಮಸೂದೆ ಅವಕಾಶ ಮಾಡಿಕೊಡುತ್ತದೆ’ ಎಂದು ರವಿ ಹೇಳಿದರು. ಅವರ ಮಾತಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ದ್ವೇಷ ಭಾಷಣ ನಿಯಂತ್ರಣಕ್ಕೆ ಸರ್ಕಾರ ಮಸೂದೆ ಮಂಡಿಸಿದೆ. ಇಲ್ಲೇ ದ್ವೇಷಭಾಷಣ ನಡೆಯುತ್ತಿದೆ. ನೀವೇ ಪ್ರಚೋದನಾಕಾರಿ ಭಾಷಣ ಮಾಡಿದರೆ ಹೇಗೆ. ಮೊದಲು ಪ್ರಚೋದನಾಕಾರಿಯಾಗಿ ಮಾತನಾಡುವುದನ್ನು ಕಡಿಮೆ ಮಾಡು’ ಎಂದು ಸಭಾಪತಿ ಬಸವರಾಜ ಹೊರಟ್ಟಿ, ರವಿಗೆ ಬುದ್ಧಿಮಾತು ಹೇಳಿದರು. 

ಅದಕ್ಕೆ ರವಿ ಅವರು, ‘ಮಸೂದೆ ಮೇಲೆ ಮಾತನಾಡುವಾಗ ಸಮಯದ ನಿರ್ಬಂಧವಿಲ್ಲ. ನೀವು ನಿರ್ಬಂಧ ಹೇರಬಾರದು. ಈ ಸದನಕ್ಕೆ ನಾನೂ ಶಾಶ್ವತ ಅಲ್ಲ, ನೀವೂ ಶಾಶ್ವತ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಸದಸ್ಯರು ರವಿ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರೂ ಎದ್ದುನಿಂತು ಸರ್ಕಾರದ ವಿರುದ್ಧ ಕೂಗಿದರು. ಆಡಳಿತ–ವಿರೋಧ ಪಕ್ಷಗಳ ಸದಸ್ಯರ ಮಾತಿನ ಗದ್ದಲ ಹೆಚ್ಚಾದ ಕಾರಣ ಸಭಾಪತಿ ಕಲಾಪವನ್ನು ಮುಂದೂಡಿದರು.

ಕಲಾಪ ಮತ್ತೆ ಆರಂಭವಾದಾಗ ಕಾಂಗ್ರೆಸ್‌ನ ಸದಸ್ಯರು, ‘ಸಿ.ಟಿ. ರವಿ ಅವರು ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು. ಬಸವರಾಜ ಹೊರಟ್ಟಿ ಅವರು, ‘ಅವರ ಮಾತನ್ನು ಪರಿಶೀಲಿಸಿ, ಅವು ಅಸಾಂವಿಧಾನಿಕವಾಗಿ ಇದ್ದರೆ ಕಡತದಿಂದ ತೆಗೆಸುತ್ತೇನೆ’ ಎಂದರು.

ಬಿಜೆಪಿಯ ಪ್ರತಾಪ ಸಿಂಹ ನಾಯಕ್‌, ಕೇಶವ ಪ್ರಸಾದ್‌, ಭಾರತಿ ಶೆಟ್ಟಿ ಅವರು, ಸಂವಿಧಾನ, 19(1)ಎ ವಿಧಿಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದರು. ಸರ್ಕಾರವು ತರಲು ಹೊರಟಿರುವ ಈ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ದ್ವೇಷ ರಾಜಕಾರಣಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ‘ಸಂವಿಧಾನವನ್ನು ವಿರೋಧಿಸುವ ಬಿಜೆಪಿ ನಾಯಕರ ಬಾಯಿಯಲ್ಲೂ, ಸಂವಿಧಾನ ಕುರಿತು ಮಾತನಾಡಿಸುವಂತಹ ಸ್ಥಿತಿಯನ್ನು ಈ ಮಸೂದೆ ತಂದಿದೆ’ ಎಂದು ಕಾಲೆಳೆದರು.

‘ಸಂವಿಧಾನದ ಕೆಲವು ಆಯ್ದ ಭಾಗಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಮಾತನಾಡುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. 19(1)ಎ ವಿಧಿಯ ನಂತರ ಬರುವ 19(2)ಎ ವಿಧಿಯ ಬಗ್ಗೆ ಅವರು ಮಾತನಾಡುವುದೇ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದರೆ, ಅದನ್ನು ನಿರ್ಬಂಧಿಸುವ ಅಧಿಕಾರವನ್ನು ಈ ವಿಧಿ ಸರ್ಕಾರಕ್ಕೆ ನೀಡುತ್ತದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.