ADVERTISEMENT

ಕೋವಿಡ್‌ ಲಸಿಕೆ ಬೇಡಿಕೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 19:06 IST
Last Updated 10 ಆಗಸ್ಟ್ 2021, 19:06 IST

ಬೆಂಗಳೂರು: ಪ್ರತಿ ವಾರ 35 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಪೂರೈಸುವಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಬೇಡಿಕೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಕೋವಿಡ್‌ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರನ್ನೊಳಗೊಂಡ ವಿಶೇಷ ಪೀಠದಲ್ಲಿ ಮಂಗಳವಾರ ನಡೆಯಿತು. ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಮೊದಲ ಡೋಸ್‌ ಪಡೆದವರಲ್ಲಿ 34.48 ಲಕ್ಷ ಜನರು ಗಡುವು ಮೀರಿದ ಬಳಿಕವೂ ಎರಡನೇ ಡೋಸ್‌ ಪಡೆಯಲು ಸಾಧ್ಯವಾಗಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

ಪ್ರತಿ ವಾರ 35 ಲಕ್ಷ ಡೋಸ್‌ ಲಸಿಕೆ ಪೂರೈಕೆಯಾದರೆ ಎಲ್ಲ ಅರ್ಹ ವ್ಯಕ್ತಿಗಳಿಗೂ ಮೂರು ತಿಂಗಳೊಳಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಆದರೆ, ಕೋವಿಶೀಲ್ಡ್‌ ಮೊದಲ ಡೋಸ್‌ ಪಡೆದವರಲ್ಲಿ 27.22 ಲಕ್ಷ ಜನರು 12 ವಾರಗಳ ನಂತರವೂ ಎರಡನೇ ಡೋಸ್‌ ಪಡೆಯಲು ಸಾಧ್ಯವಾಗಿಲ್ಲ. ಕೋವ್ಯಾಕ್ಸಿನ್‌ ಮೊದಲ ಡೋಸ್ ಪಡೆದಿರುವ 7.26 ಲಕ್ಷ ಜನರು ನಾಲ್ಕು ವಾರಗಳ ಬಳಿಕವೂ ಎರಡನೇ ಡೋಸ್‌ ಪಡೆದಿಲ್ಲ ಎಂದು ಸರ್ಕಾರ ಲಿಖಿತ ಮಾಹಿತಿಯಲ್ಲಿ ತಿಳಿಸಿದೆ.

ADVERTISEMENT

‘ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಮೊದಲ ಡೋಸ್‌ ಪಡೆದ ನಂತರ ನಿರ್ದಿಷ್ಟ ಕಾಲಮಿತಿಯೊಳಗೆ ಎರಡನೇ ಡೋಸ್‌ ಪಡೆದರೆ ಮಾತ್ರವೇ ಪರಿಣಾಮಕಾರಿಯಾಗಿರುತ್ತವೆ. ಆದ್ದರಿಂದ, ಬಾಕಿ ಇರುವ ಎಲ್ಲರಿಗೂ ತ್ವರಿತವಾಗಿ ಎರಡನೇ ಡೋಸ್‌ ಲಸಿಕೆ ನೀಡಲು ಕ್ರಿಯಾಯೋಜನೆ ರೂಪಿಸಿ, ಕಾರ್ಯತತ್ಪರವಾಗಲೇಬೇಕು’ ಎಂದು ನ್ಯಾಯಪೀಠ ಸೂಚಿಸಿತು.

ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪೈಕಿ ಶೇಕಡ 84.1ರಷ್ಟು ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.