
ಬೆಂಗಳೂರು: ‘ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಸಂಬಂಧ ಈಚೆಗೆ ಸುಪ್ರೀಂಕೋರ್ಟ್‌ನಲ್ಲಿ ಈಚೆಗೆ ನನ್ನನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ಇಳಿವಯಸ್ಸಿನಲ್ಲಿ ನಾನು ನ್ಯಾಯಾಲಯಕ್ಕೆ ಅಲೆದಾಡಬೇಕೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅರ್ಜಿಯಲ್ಲಿ ರಾಜ್ಯ ಸರ್ಕಾರ, ಕೆಲವು ರೈತರು ಮತ್ತು ನನ್ನನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಈ ಯೋಜನೆ ಆರಂಭಿಸಿದಾಗ ನಾನು ಮುಖ್ಯಮಂತ್ರಿ, ಸಿದ್ದರಾಮಯ್ಯ ಹಣಕಾಸು ಸಚಿವ ಆಗಿದ್ದರು. ಯೋಜನೆಯ ಸಂಪೂರ್ಣ ಮಾಹಿತಿ ಸಿದ್ದರಾಮಯ್ಯಗೆ ಇದೆ’ ಎಂದರು.
‘ಇಷ್ಟು ವರ್ಷದ ಇಲ್ಲದ ಅರ್ಜಿಯನ್ನು ಈಗ ಸಲ್ಲಿಸಲಾಗಿದೆ. ಅಡ್ವೊಕೇಟ್ ಜನರಲ್ ಮತ್ತು ಕಾನೂನು ಸಲಹೆಗಾರರು ಇದ್ದರೂ ರಾಜ್ಯ ಸರ್ಕಾರವು ಈ ಪ್ರಕರಣಕ್ಕೆಂದೇ ಪ್ರತ್ಯೇಕ ಕಾನೂನು ಸಲಹೆಗಾರರನ್ನು ₹50 ಲಕ್ಷ ಕೊಟ್ಟು ನೇಮಕ ಮಾಡಿದೆ. ಆದರೆ ನಾನು ಈ ವಯಸ್ಸಿನಲ್ಲಿ ಹಣ ಕೊಟ್ಟು ವಕೀಲರನ್ನು ಇಡಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರು ಕೈಬಿಟ್ಟಿದ್ದನ್ನು ಕಾಂಗ್ರೆಸ್ ಅನಗತ್ಯವಾಗಿ ದೊಡ್ಡ ವಿಚಾರ ಮಾಡುತ್ತಿದೆ. ಕಾಂಗ್ರೆಸ್‌ನ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಯಾವೆಲ್ಲಾ ಯೋಜನೆಗಳಿಗೆ ಗಾಂಧೀಜಿ ಅವರ ಹೆಸರಿಟ್ಟಿದ್ದರು ಎಂಬುದು ಜಗತ್ತಿಗೇ ಗೊತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನವರಿ 23–25ರ ನಡುವೆ ಹಾಸನ ಮತ್ತು ಬಾಗಲಕೋಟೆಯಲ್ಲಿ ಪಕ್ಷದ ಸಮಾವೇಶ ನಡೆಸುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತೇವೆಎಚ್.ಡಿ.ದೇವೇಗೌಡ ಜೆಡಿಎಸ್ ವರಿಷ್ಠ
‘ಕೇಂದ್ರವನ್ನು ದೂರಿದರೆ ಪ್ರಯೋಜನವೇನು?
‘ರಾಜ್ಯ ಸರ್ಕಾರವು ಪ್ರತಿ ವಿಷಯಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸಿದರೆ ಆಗದು. ಮುಖ್ಯಮಂತ್ರಿ ಆದವರು ಕೇಂದ್ರ ಸರ್ಕಾರದ ಸಭೆಗಳಿಗೆ ಹೋಗಿ ರಾಜ್ಯಕ್ಕೆ ಅಗತ್ಯವಿರುವ ಕೆಲಸಗಳನ್ನು ಮಾಡಿಸಿಕೊಳ್ಳಬೇಕು’ ಎಂದು ಎಚ್.ಡಿ.ದೇವೇಗೌಡ ಹೇಳಿದರು. ‘ಎಲ್ಲದಕ್ಕೂ ಕೇಂದ್ರವನ್ನು ದೂರುತ್ತಾ ಕುಳಿತರೆ ಯಾವುದೇ ಪ್ರಯೋಜನ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡುವಂತೆ ಆಗಿನ ಕೇಂದ್ರ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಅವರು ಒಪ್ಪಿರಲಿಲ್ಲ. ಅದನ್ನು ದೂರುತ್ತಾ ಕೂರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.