ADVERTISEMENT

‘ಟ್ವಿಟರ್‌ ದಾಳಿ ಮಾಡಿ ಉತ್ತರ ನೀಡದೇ ಕಾಂಗ್ರೆಸ್‌ ನಾಯಕರು ಪರಾರಿ’: ಎಚ್‌ಡಿಕೆ

ಎಚ್‌ಡಿಕೆ–ಕಾಂಗ್ರೆಸ್‌ ಟ್ವಿಟರ್ ಸಮರ ತಾರಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 12:11 IST
Last Updated 29 ಜುಲೈ 2020, 12:11 IST
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಕುರಿತು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಧ್ಯೆ ಟ್ವಿಟರ್‌ ಸಮರ ತಾರಕಕ್ಕೇರಿದೆ.

ರಾಜಸ್ಥಾನದಲ್ಲಿ ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ ಸಂಬಂಧ ಮಂಗಳವಾರ ಮಾಡಿದ್ದ ಟ್ವೀಟ್‌ಗೆ ಕಾಂಗ್ರೆಸ್ ಬುಧವಾರ‌ ತಿರುಗೇಟು‌ ನೀಡಿದ್ದು, ಕುಮಾರ ಸ್ವಾಮಿ ಅದಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಕಾಂಗ್ರೆಸ್‌ ಹೇಳಿದ್ದೇನು?

ADVERTISEMENT

ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತು ಅಧಿಕಾರ ನಡೆಸುವಾಗ ನಿಮಗೆ ಕಾಂಗ್ರೆಸ್‌ ಪಕ್ಷದ ನೈತಿಕತೆ ಚೆನ್ನಾಗಿತ್ತು. ಅಧಿಕಾರ ಇಲ್ಲದಿದ್ದಾಗ ನೈತಿಕತೆ ಪ್ರಶ್ನೆ ಬರುತ್ತದೆಯೇ ಎಂದು ಕೆಪಿಸಿಸಿ ಪ್ರಶ್ನಿಸಿದೆ.

ರಾಜ್ಯ ಸಂಕಷ್ಟದಲ್ಲಿರುವಾಗ ಅದೃಶ್ಯರು ಅಪ್ರಸ್ತುತರು ಆಗಿರುವ ನಿಮ್ಮ ಪಕ್ಷದ ನೈತಿಕತೆ ಏನು? ಆಡಳಿತ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸ್ವಯಂ ಸೇರುವುದಕ್ಕೂ ಸಂವಿಧಾನ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಆಪರೇಷನ್‌ ಕಮಲದ ಮೂಲಕ ಚುನಾಯಿತ ಸರ್ಕಾರವನ್ನು ಕೆಡಿಸುವುದಕ್ಕೂ ವ್ಯತ್ಯಾಸ ಗೊತ್ತಿಲ್ಲದಷ್ಟು ಅತಿ ಮುಗ್ಧರಾಗಿ ಬಿಟ್ಟಿರಾ ಎಂದು ಪ್ರಶ್ನಿಸಿದೆ.

ಎಚ್‌.ಡಿ.ಕುಮಾರಸ್ವಾಮಿ ಉತ್ತರ

ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್‌ನ ಅತಿರಥ ಮಹಾರಥರು ಪಕ್ಷದ ಟ್ವಿಟರ್‌ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಚರ್ಚೆ ಆರಂಭವಾಗಿದೆ, ಅದನ್ನು ಪೂರ್ಣಗೊಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯದ ನಾಯಕರು ಜೆಡಿಎಸ್‌ ಎದುರು ನಡು ಬಗ್ಗಿಸಿ ನಾವು ಬೇಡ ಎಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್‌ ಡ್ರೈವಿಂಗ್‌ ಮಾಡಿದಾಗ ಕಾಂಗ್ರೆಸ್‌ನ ನೈತಿಕತೆ ಎಲ್ಲಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಚಾಣಕ್ಯ ನೀತಿ ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನು ಇರಲಿಲ್ಲ ಎಂದಿದ್ದಾರೆ.

ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್‌ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ, ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್‌ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್‌ಗೆ ಸಲಹೆ ನೀಡಿ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದರು. ಖರ್ಗೆ ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್‌ ಒಳಗಿನ ನಾಯಕರೇ ತಡೆದರು. ಆ ನಾಯಕರು ಯಾರು, ಯಾರೆಂದು ಕಾಂಗ್ರೆಸ್‌ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತ ಎಂದು ಕಾಂಗ್ರೆಸ್‌ ನಾಯಕರು ಟ್ವಿಟರ್‌ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್‌ ಪ್ರಸ್ತುತವಾಗಿದೆ? ಪ್ರತ್ಯಕ್ಷ ರಾಜಕಾರಣ ಮಾಡುತ್ತಿದೆ, ಅನಾಥವಾಗಿದೆ. ಉತ್ತರಿಸಲು ನಾಯಕರಾರು ಇದ್ದಾರೋ ಇಲ್ಲ ಕಾಂಗ್ರೆಸ್‌ ಕೇವಲ ಟ್ವಿಟರ್‌ ಖಾತೆಗೆ ಸೀಮಿತವೋ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.