ADVERTISEMENT

ಜನಜೀವನಕ್ಕೆ ಬೆದರಿಕೆ ಇರುವಾಗ ಹಳೇ ಪಕ್ಷ, ಆಡಳಿತ ಪಕ್ಷಗಳ ಕೆಸರೆರಚಾಟ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 13:29 IST
Last Updated 23 ಜುಲೈ 2020, 13:29 IST
   

ಬೆಂಗಳೂರು: ಕೋವಿಡ್‌–19ನಿಂದಾಗಿ ಜನ, ಜೀವನಕ್ಕೆ ಬೆದರಿಕೆ ಎದುರಾಗಿರುವ ಹೊತ್ತಿನಲ್ಲಿ ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷ ಕೆಸರೆರಚಾಟದಲ್ಲಿ ತೊಡಗಿರುವುದು ಬೇಸರ ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಹೆಸರು ಹೇಳದೇ ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕೋವಿಡ್‌ ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕಸರೆರಚಾಟವನ್ನು ಗಮನಿಸಿದೆ. ಕೋವಿಡ್‌ ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೋವಿಡ್‌ ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು ನಿಜವೇ ಆಗಿದ್ದರೆ, ಅದು ಆಡಳಿತ ಪಕ್ಷದ ನೈತಿಕತೆಯೇ ಇಲ್ಲದ, ಮನುಷ್ಯತ್ವ ಹೀನ ಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕ ಎಂದು ಎಚ್‌ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು. ಮುಖ್ಯಮಂತ್ರಿ ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ, ಪರಿಣಾಮಕಾರಿಯಾಗಿ ಕೋವಿಡ್‌ ಅನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಕೋವಿಡ್‌ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ. ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ,’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.