ADVERTISEMENT

ಸಂಕ್ರಾಂತಿ ಮಾಡಲು ಹೋಗಿ ಬಿಜೆಪಿ ‘ಸಂ’ಭ್ರಾಂತಿ ಮಾಡಿಕೊಂಡಿದೆ: ಎಚ್‌ಡಿಕೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 9:08 IST
Last Updated 17 ಜನವರಿ 2019, 9:08 IST
ಎಚ್‌.ಡಿ,ಕುಮಾರಸ್ವಾಮಿ
ಎಚ್‌.ಡಿ,ಕುಮಾರಸ್ವಾಮಿ   

ಬೆಂಗಳೂರು: ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಅಂತಾ ನಾನಂತೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಎಲ್ಲವೂ ಮಾಧ್ಯಮದಲ್ಲಿ ಬಂದಿರುವ ವರದಿ ಆಧರಿಸಿ ಹೇಳುತ್ತಿದ್ದೇನೆ’ ಎಂದರು.

ರಾಜ್ಯದಲ್ಲಿ ಬಿಜೆಪಿಯವರು'ಸಂ' ಕ್ರಾಂತಿ ಮಾಡಲು ಹೋಗಿ 'ಸಂ'ಭ್ರಾಂತಿ ಮಾಡಿಕೊಂಡಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದರು.

ADVERTISEMENT

‘ಬಿಜೆಪಿ ರಾಜ್ಯಾಧ್ಯಕ್ಷರು ನಾವು ಬಿಜೆಪಿ ಶಾಸಕರಿಗೆ ಆಮಿಷ ಒಡ್ಡುತ್ತಿದ್ದೇವೆ ಎಂದು ಹೇಳುತ್ತಿರುವುದು ಆಶ್ಚರ್ಯಕರ. ನಾವು ಹೊಸ ವರ್ಷದಲ್ಲಿ ನಾನು ಕುಟುಂಬದ ಜೊತೆ ಬೇರೆ ಕಡೆ ಹೋಗಿದ್ದನ್ನು ಯಡಿಯೂರಪ್ಪ ದೊಡ್ಡ ಇಶ್ಯೂ ಮಾಡಿದರು. ಅವತ್ತು ನನ್ನ ಮೇಲೆ ಟೀಕೆ ಮಾಡಿದ ಯಡಿಯೂರಪ್ಪಗೆ ಕೇಳುತ್ತೇನೆ, ‘ಯಾವ ಪುರುಷಾರ್ಥ ಸಾಧನೆಗೆ ಗುರುಗ್ರಾಮದಲ್ಲಿ ಅವರ ಶಾಸಕರನ್ನು ಕೂಡಿ ಹಾಕಿದ್ದಾರೆ?, ಗುರುಗ್ರಾಮದಲ್ಲಿ ಹೋಟೆಲ್‌ನಲ್ಲಿ ಕೂತು ಬಿಜೆಪಿ ಶಾಸಕರು ಬರ ವೀಕ್ಷಣೆ ಮಾಡ್ತಿದ್ದಾರಾ?, ನಾನು ಎರಡು ದಿನ ಹೊರಗೆ ಹೋಗಿದ್ದಕ್ಕೆ ಚಾರ್ಜ್ ಮಾಡಿದ ಯಡಿಯೂರಪ್ಪ ‌ಇದಕ್ಕೇನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಗುರುಗ್ರಾಮದ ಖರ್ಚು ವೆಚ್ಚದ ಬಗ್ಗೆ ನಾನು ಹೇಳಲ್ಲ. ನಿಮ್ಮ ನೂರು ಶಾಸಕರನ್ನು ದಿಗ್ಬಂಧನ ಹಾಕಿ ಹೋಟೆಲ್‌ನಲ್ಲಿ ಕೂಡು ಹಾಕಿದ್ದೀರಿ. ನಾವು ಹಾಗೇನೂ ಮಾಡಿಲ್ಲ ನಮ್ಮ‌ ಶಾಸಕರನ್ನು ಫ್ರೀ ಆಗಿ ಬಿಟ್ಟಿದ್ದೇವೆ. ನಿಮ್ಮ ಹಾಗೆ ನಾವು ನಮ್ಮ ಶಾಸಕರನ್ನು ಕೂಡಿ ಹಾಕಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.