
ಕೋಲಾರ ತಾಲ್ಲೂಕಿನ ಕಾಮದೇನಹಳ್ಳಿಯಲ್ಲಿ ಭಾನುವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು
ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರ ಅಷ್ಟು ಸುಲಭವಾಗಿ ಬಿದ್ದು ಹೋಗುತ್ತದೆ ಎಂಬುದರ ಮೇಲೆ ನಾನೇನು ನಂಬಿಕೆ ಇಟ್ಟುಕೊಂಡಿಲ್ಲ, ಆ ಭ್ರಮೆಯಲ್ಲೂ ಇಲ್ಲ. ಏಕೆಂದರೆ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ಇದ್ದರೂ ಸಿಕ್ಕಿರುವ ಅವಕಾಶದಲ್ಲೇ ಎಷ್ಟು ಬೇಕು ಅಷ್ಟು ದೋಚಬೇಕು ಎಂಬ ಭಾವನೆ ಅವರಲ್ಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ತಾಲ್ಲೂಕಿನ ಕಾಮದೇನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ, ಕ್ರಾಂತಿ ಆಗುತ್ತದೆ ಎಂಬುದಾಗಿ ನಾನು ಎಲ್ಲೂ ಹೇಳಿಲ್ಲ. ಆ ಬಗ್ಗೆ ಹಗಲು ಕನಸು ಕೂಡ ಕಾಣುತ್ತಿಲ್ಲ. ಮುಂದೇನು ನಡೆಯುತ್ತದೆ ಎಂಬುದನ್ನು ಈಗಿನ ರಾಜಕಾರಣದಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಈಗಿನ ಪರಿಸ್ಥಿತಿ ಗಮನಿಸಿದರೆ ಏನು ಬೇಕಾದರೂ ಆಗಬಹುದು, ಈ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮೈಮರೆಯದೆ ಜನರ ಮಧ್ಯೆ ಕೆಲಸ ಮಾಡಿ ಎಂಬುದಾಗಿ ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದ್ದೇನೆ’ ಎಂದರು.
ಒಕ್ಕಲಿಗ ಶಾಸಕರು ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಏನು ಸಾಧನೆ ಮಾಡಿದರು, ಈ ಬಗ್ಗೆ ಅವರು ಏನಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಒಕ್ಕಲಿಗರಿಗೆ ಮಾತ್ರವಲ್ಲ; ರಾಜ್ಯ ಪ್ರತಿ ಜನರಿಗೆ ಪ್ರಾಧಾನ್ಯ ದೊರಕಬೇಕು. ಏಳು ಕೋಟಿ ಜನರ ಬದುಕನ್ನು ಸರಿಪಡಿಸುವ ಕೆಲಸವನ್ನು ಈ ಸರ್ಕಾರ ಮಾಡಬೇಕು. ಒಂದು ಜಾತಿಗೆ ಸೀಮಿತವಲ್ಲ ತಿಳಿಸಿದರು.
ಕಾಂಗ್ರೆಸ್ ಸರ್ಕಾರದವರು ಜಾತಿ ಗಣತಿಯನ್ನು ಮುಂದಿಟ್ಟುಕೊಂಡು ಕುಳಿತಿದ್ದಾರೆ. ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಎಂದು ಹೇಳುತ್ತಾ ಈಗ ಮೂರನೇ ಆಯೋಗ ರಚಿಸಿದ್ದಾರೆ. ಆದರೆ, ಕೆಲ ದಿನಗಳಿಂದ ಅದರ ಸದ್ದುಗದ್ದಲ್ಲವೇ ನಿಂತು ಹೋಗಿದೆ. ನನ್ನ ಅಧಿಕಾರಾವಧಿಯಲ್ಲಿ ಏನೂ ಮಾಡಲೇ ಇಲ್ಲವೆಂದು ಆರೋಪಿಸಿದ್ದರು. ಎರಡೂವರೆ ವರ್ಷಗಳಿಂದ ಇವರು ಏನು ಮಾಡಿದ್ದಾರೆ ಎಂದು ಕೇಳಿದರು.
ಈ ಎಲ್ಲಾ ಬೆಳವಣಿಗೆಗಳ ಕಾರಣಗಳಿಂದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜನಗಳ ಮಧ್ಯೆ ಅವರ ಕಷ್ಟಸುಖಗಳಲ್ಲಿ ಯಾವ ರೀತಿ ಭಾಗಿಯಾಗುತ್ತಾರೋ ಅಷ್ಟು ಶಕ್ತಿಯನ್ನು ನಮಗೆ ಜನರು ತುಂಬುತ್ತಾರೆ ಎಂಬುದಾಗಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದ್ದೇನೆ ಎಂದು ನುಡಿದರು.
ಬಿಹಾರ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ‘ಅಲ್ಲಿನ ಚುನಾವಣೆ ನಡೆದಿರುವುದೇ ಬೇರೆ ರೀತಿ, ಕರ್ನಾಟಕದಲ್ಲಿ ನಡೆಯುವ ಚುನಾವಣಾ ರೀತಿಯೇ ಬೇರೆ. ನಿತೀಶ್ ಕುಮಾರ್ ಅವರ 20 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಜನಸಂಪರ್ಕ ಬೆಳೆಸಿಕೊಂಡ ರೀತಿ ಹಾಗೂ ಉತ್ತಮ ಆಡಳಿತಕ್ಕೆ ಫಲ ಸಿಕ್ಕಿದೆ ಎಂದರು.
ಜೆಡಿಎಸ್ ಕೋಲಾರ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ ಪುತ್ರನ ಮದುವೆ ಆರತಕ್ಷತೆಯಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು. ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್, ಕೃಷ್ಣಾರೆಡ್ಡಿ, ತೂಪಲ್ಲಿ ಚೌಡರೆಡ್ಡಿ, ಯಲವಾರ ಸೊಣ್ಣೇಗೌಡ ಇದ್ದರು.
ಸ್ಥಳೀಯ ಸಂಸ್ಥೆ ಚುನಾವಣೆ– ಸ್ಥಳೀಯವಾಗಿಯೇ ನಿರ್ಧಾರ
ಬಿಜೆಪಿ ಜೊತೆ ಮೈತ್ರಿಯಾಗಿಯೇ ಎಲ್ಲಾ ಚುನಾವಣೆ ಎದುರಿಸಬೇಕೆಂಬುದು ಎಲ್ಲರ ಭಾವನೆ. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳ ಸಂದರ್ಭದಲ್ಲಿ ಕೆಲ ನಿರ್ಧಾರಗಳನ್ನು ಸ್ಥಳೀಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮೈತ್ರಿಯಾಗಿ ಗಟ್ಟಿಯಾಗಿ ನಿಂತು ಕೆಲಸ ಮಾಡುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ಸರ್ಕಾರ ಅಷ್ಟು ಸುಲಭವಾಗಿ ನಡೆಸುತ್ತದೆ ಎಂಬ ನಂಬಿಕೆ ನಮಗೆ ಇಲ್ಲ. ಆದರೆ, ನ್ಯಾಯಾಲಯ ಆದೇಶದ ಮೇರೆಗೆ ಮಾಡಲೇಬೇಕಾದ ಅನಿವಾರ್ಯ ಬಂದರೆ ಆಗ ನೋಡೋಣ ಎಂದರು.
ಎತ್ತಿನಹೊಳೆ ನೀರು ಬರುವುದು ಅನುಮಾನ
‘2013ರಲ್ಲಿ ನಾನು ಇಲ್ಲಿಗೆ ಮದುವೆಯೊಂದಕ್ಕೆ ಬಂದಿದ್ದಾಗ ಎತ್ತಿನಹೊಳೆ ನೀರಿನ ಬಗ್ಗೆ ಕೇಳಿದ್ದಿರಿ. ನೀರು ಬಂದರೆ ಕೂದಲು ಬೋಳಿಸಿಕೊಳ್ಳುವುದಾಗಿ ಆಗ ಹೇಳಿದ್ದೆ. ಈಗ ನನ್ನ ಕೂದಲು ಉದುರಿ ಹೋಗಿದೆ ಬಿಡಿ. ಅವರು ಬೋಳಿಸುವಂಥದ್ದು, ನಾನು ಬೋಳಿಸಿಕೊಳ್ಳುವಂಥದ್ದು ಏನೂ ಇಲ್ಲ. ಅದಾಗಿ ಹತ್ತು ವರ್ಷ ಆಯಿತು. ಈವರೆಗೆ ನೀರು ಬಂದಿಲ್ಲ, ನೀರು ಬರುವುದು ಅನುಮಾನ ಎಂದು ಕುಮಾರಸ್ವಾಮಿ ಹೇಳಿದರು.
ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷಗಳಲ್ಲಿ ಮುಗಿಸಿ ನೀರು ಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂಬುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ಗ್ಯಾರಂಟಿ ಹೆಸರಲ್ಲಿ ಕೋಟ್ಯಂತರ ವಸೂಲಿ
ಕಾಂಗ್ರೆಸ್ ಸರ್ಕಾರ 136 ಸ್ಥಾನ ಗೆದ್ದರೂ ಐದು ಗ್ಯಾರಂಟಿ ಯೋಜನೆ ಬಿಟ್ಟು ಮುಂದೆ ಹೋಗಲೇ ಇಲ್ಲ. ಆ ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆಯೇ ಅದೂ ಇಲ್ಲ. ಮೆಕ್ಕೆಜೋಳ ಬೆಳೆದವರ ಪರಿಸ್ಥಿತಿ ಹೇಗಿದೆ ನೋಡಿ. ಈ ಸರ್ಕಾರದ ಕೊಡುಗೆ ಏನು? ಉದ್ಯೋಗಿ ಸೃಷ್ಟಿ ಎಲ್ಲಿಗೆ ಬಂದು ನಿಂತಿದೆ? ಗ್ಯಾರಂಟಿ ನೀಡಿ ಅದೇ ಜನರ ಮೇಲೆ ದಾಖಲೆ ತೆರಿಗೆ ವಿಧಿಸಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಆರ್ಥಿಕ ಸಚಿವರಾದ ಆದ ಮೇಲೆ ಐದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.
ರಾಜ್ಯ ರಾಜಕಾರಣಕ್ಕೆ ನನ್ನ ಅವಶ್ಯ ಯಾವಾಗ ಬೇಕಾಗುತ್ತದೆಯೋ ಆಗ ಜನರೇ ಕರೆದುಕೊಂಡು ಬರುತ್ತಾರೆಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.