ADVERTISEMENT

ಬಿಜೆಪಿಯ ಕೆಲವು ಅಪ್ರಬುದ್ಧರ ಹೇಳಿಕೆಯಿಂದ ಹಿರಿಯರಿಗೆ ಅಪಮಾನ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:13 IST
Last Updated 29 ಸೆಪ್ಟೆಂಬರ್ 2020, 6:13 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಬೆಂಗಳೂರು ಉಗ್ರರ ಕೇಂದ್ರವಾಗಿದೆ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮತ್ತು ಪಕ್ಷದ ಹಿರಿಯರಿಗೆ ಮಾಡಿದ ಅಪಮಾನ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಬೆಂಗಳೂರು ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ, ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಮಾತ್ರವಲ್ಲ, ಬೆಂಗಳೂರು ನಾಲ್ಕು ಲೋಕಸಭೆ ಕ್ಷೇತ್ರ ಮಾತ್ರವಲ್ಲ. ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಮತ ಧೃವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಈ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ. ಈ ಹೇಳಿಕೆ ಸಂಬಂಧ ಬಿಜೆಪಿ ಸಂಬಂಧಿಸಿದವರಿಂದ ಕ್ಷಮೆ ಕೇಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಅಪ್ರಬುದ್ಧರ ಹೇಳಿಕೆಯನ್ನು ಸಮರ್ಥಿಸಲಾಗದೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಟ ಅನುಭವಿಸಿದ್ದನ್ನು ನಾನು ಮಾಧ್ಯಮದ ಮೂಲಕ ನೋಡಿದೆ. ಈ ಅಪ್ರಬುದ್ಧ ಹೇಳಿಕೆ ಬಿಜೆಪಿಯ ಹಿರಿಯರಿಗೆ ಮಾಡಿದ ಅಪಮಾನವೂ ಹೌದು’ ಎಂದು ಹೇಳಿದ್ದಾರೆ.

ADVERTISEMENT

‘ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಕೆಲ ಮಂದಿ ಡಿ.ಜೆ.ಹಳ್ಳಿ ಘಟನೆ ನಂತರ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಮ್ಮ ಟೀಕೆ ಉಗ್ರರ ವಿರುದ್ಧ ಇರಬೇಕು. ಆದರೆ, ಕೋಟ್ಯಂತರ ಜನರಿಗೆ ಅನ್ನ, ಆಶ್ರಯ, ಜೀವನ ನೀಡುತ್ತಿರುವ ತಾಯಿಯಂಥ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕಿಬಿದ್ದ ಮಾತ್ರಕ್ಕೆ ಬೆಂಗಳೂರು ಅವರದ್ದಲ್ಲ. ಬೆಂಗಳೂರು ನಮ್ಮದು’ ಎಂದು ತಿಳಿಸಿದ್ದಾರೆ.

‘ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ!' ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.