ADVERTISEMENT

ಕುಮಾರಸ್ವಾಮಿ ರಾಜೀನಾಮೆ: ಡಿವಿಎಸ್‌ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:49 IST
Last Updated 22 ಮೇ 2019, 19:49 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ (ಮೇ 24) ಬೆಳಿಗ್ಗೆವರೆಗೆ ಮಾತ್ರ ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಮೈತ್ರಿ ಸರ್ಕಾರ ಒಂದು ಕ್ಷಣವೂ ಉಳಿಯುವುದಿಲ್ಲ ಎಂದು ಬುಧವಾರ ತಿಳಿಸಿದರು.

‘ಅವರಿಗೆ ನಾಳೆ ರಾತ್ರಿ ನಿದ್ದೆಯೇ ಬರುವುದಿಲ್ಲ. ನಾಡಿದ್ದು ಬೆಳಿಗ್ಗೆ ಖಂಡಿತಾ ರಾಜೀನಾಮೆ ಕೊಡುತ್ತಾರೆ.ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಬಿಜೆಪಿಯೇ ಸರ್ಕಾರ ರಚಿಸುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಜೆಡಿಎಸ್‌, ರಾಜ್ಯದಲ್ಲಿ ಒಂದು ಸ್ಥಾನ ಗೆಲ್ಲಬಹುದು. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ನೈತಿಕವಾಗಿ ಹೇಗೆ ಮುಂದುವರಿಯಲು ಸಾಧ್ಯ ಎಂದು ಪ್ರಶ್ನಿಸಿದರು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷ ಹೀನಾಯವಾಗಿ ಸೋಲಲಿದೆ. ಅಲ್ಲಿ ತೆಲುಗುದೇಶಂ ಸೋತರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರವೂ ಸೋಲುತ್ತದೆ. ನಾಯ್ಡು ಅವರಿಗೆ ಮಾಡಲು ಕೆಲಸವಿಲ್ಲದೆ, ಪ್ರತಿಪಕ್ಷಗಳನ್ನು ಒಗ್ಗೂಡಿಸುವ ನಾಟಕದಲ್ಲಿ ತೊಡಗಿದ್ದಾರೆ ಎಂದು ಲೇವಡಿ ಮಾಡಿದರು.

ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್‌ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಬಹುಮತ ಪಡೆಯಲಿದೆ. ಇದರಿಂದ ಹತಾಶಗೊಂಡಿರುವ ನಾಯ್ಡು, ಇವಿಎಂಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.