ADVERTISEMENT

ಮಹಾರಾಷ್ಟ್ರ ಚೀನಾದಂತೆ ಮಾತನಾಡುವುದನ್ನು ಬಿಡಬೇಕು: ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 14:54 IST
Last Updated 27 ಜನವರಿ 2021, 14:54 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಠಾಕ್ರೆ ಅವರೇ ಬೆಳಗಾವಿ ಮರಾಠಿಗರದ್ದಲ್ಲ, ವೀರ ಕನ್ನಡಿಗರದ್ದು ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾವು ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡಿ, ವಿಧಾನಸೌಧ ನಿರ್ಮಿಸಿ, ಅಧಿವೇಶನ ನಡೆಸಿರುವುದನ್ನು ತಪ್ಪು ಎಂದೂ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಬೆಳಗಾವಿ ವಿಚಾರದಲ್ಲಿ ಸಲ್ಲದ ಕಿತಾಪತಿ ಮಾಡುತ್ತವೆ ಎಂಬುದನ್ನು ಅರಿತೇ ನನ್ನ ಸರ್ಕಾರದ ಅವಧಿಯಲ್ಲಿ ಅಲ್ಲಿ ವಿಧಾನಸೌಧ ನಿರ್ಮಿಸಲಾಯಿತು. ಅಧಿವೇಶನವನ್ನೂ ನಡೆಸಲಾಯಿತು. ಬೆಳಗಾವಿಯ ಸುವರ್ಣ ಸೌಧ ಮಹಾರಾಷ್ಟ್ರದ ವಿಸ್ತರಣಾವಾದವನ್ನು ವಿರೋಧಿಸಿ ನಿಂತಿರುವ, ಕನ್ನಡಿಗರ ಸ್ವಾಭಿಮಾನಿ ಸೌಧವದು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಹಠದಿಂದಲೇ ರಚನೆಯಾದ ಮಹಾಜನ ಸಮಿತಿ ವರದಿಯಲ್ಲಿ ಬೆಳಗಾವಿ ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಒಪ್ಪದ ಮಹಾರಾಷ್ಟ್ರ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿರುವ ಪ್ರಕರಣವೊಂದರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತಾಡುತ್ತಿರುವ ಉದ್ಧವ್ ಠಾಕ್ರೆ, ವಿಚಾರಣೆಯ ದಿಕ್ಕನ್ನೇ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಮಹಾರಾಷ್ಟ್ರ ಚೀನಾದಂತೆ ಮಾತನಾಡುವುದನ್ನು ಮೊದಲು ಬಿಡಬೇಕು. ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಅವರ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಬಾರದು. ಗಡಿ ಎಂದ ಮೇಲೆ ಅದು ಎರಡು ಭಾಷೆ, ಎರಡೂ ರಾಜ್ಯಗಳ ಜನರ ಸಂಗಮ. ಅದರಲ್ಲಿ ನಮ್ಮವರೇ ಹೆಚ್ಚು, ನಾವೇ ಶಕ್ತಿವಂತರು ಎಂಬ ವಾದ ಸರಿಯಲ್ಲ ಎಂದು ಹೇಳಿದ್ದಾರೆ.

ಶಿವಸೇನೆಯೊಂದಿಗೆ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್‌ ಪಕ್ಷ ಗಡಿ ವಿಚಾರದಲ್ಲಿ ಉದ್ಧವ್ ಠಾಕ್ರೆಗೆ ಬುದ್ಧಿ ಹೇಳಬೇಕು. ರಾಜ್ಯ ಕಾಂಗ್ರೆಸ್‌ ನಾಯಕರು ಬಾಯಿ ಉಪಚಾರಕ್ಕೆ ಠಾಕ್ರೆ ಮಾತುಗಳನ್ನು ಖಂಡಿಸಿದರೆ ಸಾಲದು. ಬದಲಿಗೆ ಬೆಳಗಾವಿ ನಮ್ಮದೇ ಎಂಬುದನ್ನು ಮನದಟ್ಟು ಮಾಡಬೇಕು. ಬೆಳಗಾವಿ ಬಗೆಗೆ ಠಾಕ್ರೆಗೆ ಇರುವ ಭ್ರಮೆಗೆ ಚಿಕಿತ್ಸೆ ಕೊಡಿಸಬೇಕು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂದಾಗ ಠಾಕ್ರೆಗೆ ಒಂದು ಸಲಹೆ ನೀಡಿದ್ದೆ. ಕರ್ನಾಟಕ-ಮಹಾರಾಷ್ಟ್ರದ ಇತಿಹಾಸ ಓದಬೇಕೆಂಬುದು ಆ ಸಲಹೆ ಆಗಿತ್ತು. ಚರಿತ್ರೆ ಓದಿದ್ದರೆ ಮಹಾರಾಷ್ಟ್ರವು ಕನ್ನಡದ ಅರಸರಿಂದ ಆಳಿಸಿಕೊಂಡ ನಾಡು ಎಂಬುದು ಅವರಿಗೂ ತಿಳಿಯುತ್ತಿತ್ತು. ಅವರು ಓದಿದಂತೆ ಕಾಣುತ್ತಿಲ್ಲ. ಚರಿತ್ರೆ ಓದಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.