ADVERTISEMENT

ಕೊರೊನಾ ಸಂಕಷ್ಟ | ಶಾಸಕರಿಗೆ ಉಡುಗೊರೆ, ಜನತೆಗೆ ಬರೆ: ಎಚ್.ಡಿ. ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 11:42 IST
Last Updated 27 ಜುಲೈ 2020, 11:42 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ವರ್ಷಾಚರಣೆಯ ಸಂಭ್ರಮದಲ್ಲಿ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ಬಿಜೆಪಿ ಸರ್ಕಾರ ತನ್ಮಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರ್ಕಾರವು 24 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ಉಡುಗೊರೆಯನ್ನು ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಿದೆ ಎಂದು ದೂರಿದ್ದಾರೆ.

ಸರ್ಕಾರ ಮಾತ್ರವಲ್ಲ, ಜನತೆಯು ಕೂಡ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವಾಗ ಬೊಕ್ಕಸ ಹಾಗೂ ಜನಸಾಮಾನ್ಯನ ಮೇಲೆ ಹೊರೆ ಹೇರುವ ಮೂಲಕ 'ಶಾಸಕರಿಗೆ ಉಡುಗೊರೆ, ಜನತೆಗೆ ಬರೆ' ಎಳೆಯುವ ಬಿಜೆಪಿ ರಾಜ್ಯ ಸರ್ಕಾರದ ನಿರ್ಲಜ್ಜ ನಡವಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

ADVERTISEMENT

ಬಿಜೆಪಿ ಸರ್ಕಾರಕ್ಕೆ ಸಾಮಾನ್ಯರ ಹಿತ ಮುಖ್ಯವೋ? ಕುರ್ಚಿ ಉಳಿಸಿಕೊಳ್ಳಲು ಶಾಸಕರ ಹಿತ ಮುಖ್ಯವೋ? ರಾಜ್ಯದ ಜನತೆಗೆ ಉಡುಗೊರೆ ಕೊಡಬೇಕಾಗಿದ್ದ ಸರ್ಕಾರ ಶಾಸಕರ ತೃಪ್ತಿಪಡಿಸುವ ಅನಾಚಾರ ಪ್ರದರ್ಶಿಸಿದೆ. ರಾಜ್ಯ ಎದುರಿಸುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗಾದಿಯ ಮೇಲೆ ಸವಾರಿ ಮಾಡುವುದು ವಿಹಿತವೇ ಎಂಬುದನ್ನು ಶಾಸಕರು ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

ಹಗಲನಿರುಳು ಮಾಡಿ, ಇರುಳ ಹಗಲ ಮಾಡಿ
ಆಚಾರವ ಅನಾಚಾರವ ಮಾಡಿ
ಅನಾಚಾರವ ಆಚಾರವ ಮಾಡಿ
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು ಗುಹೇಶ್ವರಾ. ಎಂದು ಅಲ್ಲಮ ಪ್ರಭುವಿನ ವಚನವನ್ನು ಬರೆದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.