ADVERTISEMENT

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೊರೊನಾ ಉಪಯೋಗಿಸಿಕೊಂಡರೇ ಮೋದಿ? ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 2:39 IST
Last Updated 5 ಏಪ್ರಿಲ್ 2020, 2:39 IST
ಎಚ್‌.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಎಚ್‌.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)   

ಬೆಂಗಳೂರು: ‘ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಸಂಕಷ್ಟವನ್ನು ಉಪಯೋಗಿಸಿಕೊಂಡರೇ?’ ಇಂದು ರಾತ್ರಿ 9 ಗಂಟೆಗೆ ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ಮೋದಿಯವರ ಕರೆಯ ಬಗ್ಗೆ ಈ ರೀತಿ ಪ್ರಶ್ನಿಸಿದ್ದಾರೆ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ.

ಸರಣಿ ಟ್ವೀಟ್ ಮಾಡಿರುವ ಅವರು, ‘6 ಎಪ್ರಿಲ್ 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿನ ದಿನ 5-04-2020ಕ್ಕೆ ಬಿಜೆಪಿಗೆ ನಲವತ್ತು ವರ್ಷ ತುಂಬುತ್ತವೆ. ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಕೊರೊನಾ ಸಂಕಷ್ಟದ ದಿನಗಳಲ್ಲಿ ನೇರಾನೇರ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

‘ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏಪ್ರಿಲ್ 5ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟಪಡಿಸಬೇಕು. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ?’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ, ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ?
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ..
ಕೈ ಹಿಡಿದು
ನಡೆಸೆನ್ನನು.....’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೊರೊನಾ ಅಂಧಕಾರ ಓಡಿಸಲು ಏಪ್ರಿಲ್ 5ರಂದು ರಾತ್ರಿ (ಇಂದು) 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಒಂಬತ್ತು ನಿಮಿಷಗಳು ದೀಪ, ಮೇಣದ ಬತ್ತಿ, ಟಾರ್ಚ್‌ ಅಥವಾ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಬೆಳಗುವಂತೆ ವಿಡಿಯೊ ಸಂದೇಶದಲ್ಲಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.