ಎಚ್‌ಡಿಕೆ
ನವದೆಹಲಿ: ಮೂಡಾದಲ್ಲಿ ತಮಗೂ ನಿವೇಶನವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೀಡಿರುವ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ‘ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸದಿರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮೈಸೂರಿನಲ್ಲಿ ನನಗೆ ನಿವೇಶನ ಕೊಟ್ಟಿದ್ದಾರೆ ಎಂದಿದ್ದಾರೆ ಅವರಿಬ್ಬರು. ಹಣ ಕಟ್ಟಿ 40 ವರ್ಷ ಕಳೆದರೂ ಈವರೆಗೆ ಆ ನಿವೇಶನವನ್ನೇ ನನಗೆ ಕೊಟ್ಟಿಲ್ಲ’ ಎಂದರು.
‘ಈ ನಿವೇಶನದ ಬಗ್ಗೆ ರಾಮಕೃಷ್ಣ ಹೆಗಡೆ ಕಾಲದಿಂದಲೂ ತನಿಖೆ ನಡೆಯುತ್ತಿದೆ. ಲೋಕಾಯುಕ್ತ, ಸಿಐಡಿ ತನಿಖೆಗಳು ನಡೆದು ಹೋಗಿವೆ. 500 ನಿವೇಶನಗಳನ್ನು ದೇವೇಗೌಡರು ಪಡೆದುಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು. ಕೊನೆಗೆ ತನಿಖೆಯಲ್ಲಿ ಒಂದು ನಿವೇಶನವನ್ನಷ್ಟೇ ಪಡೆದುಕೊಂಡಿದ್ದಾರೆ ಎಂದು ಗೊತ್ತಾಯಿತು’ ಎಂದು ಸಚಿವರು ಮಾಹಿತಿ ನೀಡಿದರು.
‘ಈ ನಿವೇಶನವನ್ನು ಅವರು ನನಗೆ ಧರ್ಮಕ್ಕೆ ಕೊಡುತ್ತಿಲ್ಲ. ನಾನು 34,000 ಹಣ ಕಟ್ಟಿದ್ದೇನೆ’ ಎಂದರು.
‘ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆರ್ಭಟ ನೋಡಿದೆ. ಈ ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿರುವುದು ಎಂಬುದು ನನಗೆ ಗೊತ್ತಿದೆ. ಬೆಂಗಳೂರು ನಗರದಲ್ಲಿ ಈ ಮಹಾಶಯ ಏನೆಲ್ಲಾ, ಯಾವೆಲ್ಲಾ ಭ್ರಷ್ಟಾಚಾರ ಎಸಗಿದ್ದಾರೆ ಎಂಬುದನ್ನು ತೆಗೆದರೆ ಈ ವ್ಯಕ್ತಿಯ ಅಸಲಿ ಬಂಡವಾಳ ಗೊತ್ತಾಗುತ್ತದೆ. ಬೆಂಗಳೂರು ಸುತ್ತಮುತ್ತ ಮಾಡಿದ್ದಾರಲ್ಲ.. ಅದನ್ನಷ್ಟೇ ತೆಗೆದಿಟ್ಟರೆ ಸಾಕು’ ಎಂದು ಅವರು ತಿರುಗೇಟು ನೀಡಿದರು.
ನಿಂಗಪ್ಪ ಸ್ವರ್ಗದಿಂದ ಬಂದು ಸಿದ್ದರಾಮಯ್ಯಗೆ ಅರ್ಜಿ ಕೊಟ್ಟರಾ?
‘16/2 ಮಾಡಿದ ಮೇಲೆ ಪುನಃ ನಿವೇಶನ ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಂಗಪ್ಪ ಎನ್ನುವ ವ್ಯಕ್ತಿ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಎಂದು ಸ್ವರ್ಗದಿಂದ ಇಳಿದುಬಂದು ನಿಮಗೆ ಅರ್ಜಿ ಕೊಟ್ಟಿದ್ದರಾ ಸಿದ್ದರಾಮಯ್ಯ ಅವರೇ? ನಿಂಗಪ್ಪ ಸತ್ತ ಮೇಲೆ ಡಿನೋಟಿಫಿಕೇಶನ್ ಮಾಡಲು ಅರ್ಜಿ ಸಲ್ಲಿಸಲಾಗಿದೆ. 2001, 2003ರಲ್ಲಿ ಮುಖ್ಯಮಂತ್ರಿಯವರ ಪತ್ನಿಗೆ ಮೈಸೂರಿನ ವಿಜಯನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. 2005ರಲ್ಲಿ ಕೃಷಿಭೂಮಿ ಎಂದಿದ್ದ ಭೂಮಿಯನ್ನು ಇವರು ಹೇಗೆ ಖರೀದಿ ಮಾಡಿದರು? ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡದೆಯೇ ಭೂ ಪರಿವರ್ತನೆ ಮಾಡಿಕೊಟ್ಟರು. ಅದು ಹೇಗೆ ಮಾಡಿಕೊಟ್ಟರು?’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.