ADVERTISEMENT

ಅಂಗವಿಕಲರ ಜೊತೆ ಎಚ್.ಡಿ. ಕುಮಾರಸ್ವಾಮಿ ಸಂಕ್ರಾಂತಿ ಆಚರಣೆ

ತೋಟದ ಮನೆಯಲ್ಲಿ ಬೆಸ್ಕಾಂ, ಕೆಪಿಟಿಸಿಎಲ್ ಅಂಗವಿಕಲ ನೌಕರರ ಕುಟುಂಬಗಳ ಜೊತೆ ಹಬ್ಬ ಆಚರಿಸಿದ ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 13:03 IST
Last Updated 15 ಜನವರಿ 2026, 13:03 IST
   

ಬಿಡದಿ (ರಾಮನಗರ): ಇಲ್ಲಿನ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗವಿಕಲ ಉದ್ಯೋಗಿಗಳ ಜೊತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ನೌಕರರ ಜೊತೆ ಎಚ್‌ಡಿಕೆ ಅವರ ಏಳನೇ ವರ್ಷದ ಹಬ್ಬದ ಆಚರಣೆ ಇದಾಗಿದೆ.

ಹಬ್ಬದ ಪ್ರಯುಕ್ತ ನೌಕರರು, ಮಕ್ಕಳು ಹಾಗೂ ಅವರ ತಂದೆ–ತಾಯಂದಿರು ಸೇರಿದಂತೆ 600ಕ್ಕೂ ಜನರು ಇಂದು ಎಚ್‌ಡಿಕೆ ನಿವಾಸದಲ್ಲಿ ಜಮಾಯಿಸಿದರು. ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ ಎಚ್‌ಡಿಕೆ, ಬಳಿಕ ಅವರೊಂದಿಗೆ ಎಳ್ಳುಬೆಲ್ಲ ಸೇವಿಸಿದರು.

ಬಳಿಕ ಮಾನತಾಡಿದ ಎಚ್‌ಡಿಕೆ, ‘ನಿಮ್ಮನ್ನು ನೋಡುತ್ತಿದ್ದರೆ ನನ್ನ ಹೃದಯ ತುಂಬಿ ಬರುತ್ತಿದೆ. ದೇವರು ಕೊಟ್ಟ ಸಣ್ಣ ಅವಕಾಶದಲ್ಲಿ ನಿಮಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. ಅದನ್ನೇ ನೀವೆಲ್ಲರೂ ಹೃದಯದಲ್ಲಿ ಇಟ್ಟುಕೊಂಡು ನನ್ನ ಮೇಲೆ ಪ್ರೀತಿ, ವಾತ್ಸಲ್ಯ ತೋರುತ್ತಿರುವುದು ನನ್ನ ಜೀವನಕ್ಕೆ ಸಾರ್ಥಕತೆ ತಂದಿದೆ’ ಎಂದು ಭಾವುಕರಾದರು.

ADVERTISEMENT

‘ನಿಮ್ಮ ಜೀವನ ಎಲ್ಲರಿಗೂ ಮಾದರಿ. ಶ್ರಮ ವಹಿಸಿ ಕೆಲಸ ಮಾಡುತ್ತೀರಿ. ಸರ್ಕಾರ ನೀಡುವ ಸಂಬಳದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದೀರಿ. ನಿಮ್ಮ ಜೀವನ, ಬೆಳವಣಿಗೆ ಸಮಾಜಕ್ಕೆ ಮಾದರಿ. ನೀವು, ನಿಮ್ಮ ಕುಟುಂಬ, ನಿಮ್ಮ ಮಕ್ಕಳು ಇನ್ನೂ ಎತ್ತರದ ಸಾಧನೆ ಮಾಡಬೇಕು’ ಎಂದು ಶುಭ ಹಾರೈಸಿದರು.

ಪುತ್ರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮುಖಂಡರು ಇದ್ದರು.

ಹಿನ್ನೆಲೆ ಏನು?:

ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆಯುತ್ತಿದ್ದ ಜನತಾ ದರ್ಶನದಲ್ಲಿ ಅಂಗವಿಕಲರು ಉದ್ಯೋಗ ಕೋರಿ ಮನವಿ ಸಲ್ಲಿಸಲು ಬರುತ್ತಿದ್ದರು. ಆಗ ಕುಮಾರಸ್ವಾಮಿ ಅವರು, ಬೆಸ್ಕಾಂ ಸೇರಿ ಕೆಪಿಟಿಸಿಎಲ್‌ನ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ 600ಕ್ಕೂ ಹೆಚ್ಚು ಅಂಗವಿಕಲರನ್ನು ನೇಮಕ ಮಾಡಿದರು.

ಉದ್ಯೋಗಿಗಳಿಗೆ 2018ರವರೆಗೂ ಸೇವೆ ಕಾಯಂ ಆಗಲಿಲ್ಲ. ಅದುವರೆಗೂ ಯಾವುದೇ ಸರ್ಕಾರ ಅಂಗವಿಕಲರ ಮನವಿಗೆ ಸ್ಪಂದಿಸಿರಲಿಲ್ಲ. 2018ರಲ್ಲಿ ಎಚ್‌ಡಿಕೆ ಮತ್ತೆ ಮುಖ್ಯಮಂತ್ರಿಯಾದಾಗ, ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಅಂಗವಿಕಲರ ಸೇವೆಯನ್ನು 2019 ಜ. 14ರಂದು ಸಂಕ್ರಾಂತಿ ಹಬ್ಬದ ದಿನವೇ ಕಾಯಂ ಮಾಡಿದ ಆದೇಶ ಹೊರಡಿಸಿದರು.

ಇದರಿಂದಾಗಿ ಎಸ್ಎಸ್ಎಲ್‌ಸಿ ಪಾಸಾಗಿದ್ದ 300 ಹಾಗೂ ಪದವೀಧರದ 300 ಅಂಗವಿಕಲರಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗಾವಕಾಶದೊಂದಿಗೆ ಹೊಸ ಬದುಕು ಸಿಕ್ಕಿತು. ಅಂದಿನಿಂದ ಅಷ್ಟೂ ಉದ್ಯೋಗಿಗಳು ಸಂಕ್ರಾಂತಿ ದಿನದಂದು ಎಚ್‌ಡಿಕೆ ಅವರ ಮನೆಗೆ ಬಂದು ಹಬ್ಬದ ಶುಭಾಶಯ ಕೋರಿ, ಅವರೊಂದಿಗೆ ಆಚರಿಸುತ್ತಾರೆ.

ಅಂಗವಿಕಲರಿಗೆ ಅನುಕಂಪದ ಬದಲು ಆರ್ಥಿಕ ನೆರವು ಒದಗಿಸಬೇಕು. ನನಗೆ ಅವಕಾಶ ಸಿಕ್ಕಾಗ ಸಣ್ಣ ಸಹಾಯ ಮಾಡಿದೆ. ದೈಹಿಕವಾಗಿ ಶಕ್ತಿ ಇಲ್ಲದವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಅಂತಹವರ ಒಳಿತಿಗಾಗಿ ಯಾವಾಗಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಬದುಕು ಬದಲಿಸಿದ ಎಚ್‌ಡಿಕೆ

ಕುಮಾರಸ್ವಾಮಿ ಅವರಿಂದಾಗಿ ನಮ್ಮ ಬದುಕೇ ಬದಲಾಯಿತು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ನಮ್ಮ ವೇತನ ₹3 ಸಾವಿರ ಇತ್ತು. ಕಾಯಂ ಆದ ಬಳಿಕ ₹80 ಸಾವಿರದಿಂದ ₹1 ಲಕ್ಷದವರೆಗೆ ವೇತನ ಪಡೆಯುತ್ತಿದ್ದೇವೆ. ಸ್ವಂತ ಮನೆ ಕಟ್ಟಿಕೊಂಡಿದ್ದೇವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ಕುಮಾರಸ್ವಾಮಿ ಅವರಿಂದ. ಹೀಗಾಗಿ ಪ್ರತಿ ವರ್ಷ ಅವರ ಜೊತೆ ಸಂಕ್ರಾಂತಿ ಆಚರಿಸುತ್ತೇವೆ ಎಂದು ಉದ್ಯೋಗಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.