ಮೈಸೂರು: ‘ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಣ್ಣತನದ ಹೇಳಿಕೆ ನೀಡಿದ್ದಾರೆ. ಅವರು ಕಾಮೆಡಿಯನ್ ರೋಲ್ ಮಾಡ್ತಿದ್ದಾರಾ ಅಥವಾ ವಿಲನ್ ರೋಲ್ ಮಾಡ್ತಿದ್ದಾರಾ?’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಉರ್ದು ಭಾಷೆ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಚೂರಿಯಲ್ಲಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಪ್ರಚೋದನಕಾರಿ ಹೇಳಿಕೆ ಕೊಟ್ಟು, ನಂತರ ಸ್ಪಷ್ಟೀಕರಣ ನೀಡಿದ್ದಾರೆ. ಗೃಹ ಸಚಿವರಾದವರು ಹೀಗೆ ಹೇಳಿಕೆ ಕೊಟ್ಟರೆ ಹೇಗೆ? ಜವಾಬ್ದಾರಿ ಮರೆತು, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಈಗ ಮಾವು ಮಾರಾಟಕ್ಕೆ ಗಲಾಟೆ ಶುರುವಾಗಿದೆ. ಮುಂದೆ ಹುಣಸೆ, ಸಪೋಟಕ್ಕೂ ಶುರುವಾಗಬಹುದು. ರೈತರು ಮಾವನ್ನು ಮುಸ್ಲಿಮರು, ಹಿಂದೂ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ವಿಶ್ವ ಹಿಂದೂ ಪರಿಷತ್‌ನವರು ಬಂದು ವ್ಯಾಪಾರ ಮಾಡುತ್ತಾರಾ? ನೀವು ಬೇಕಾದರೆ ನಾಮ ಹಾಕಿಕೊಂಡು ಓಡಾಡಿ, ನಮ್ಮ ರೈತರಿಗೆ ನಾಮ ಹಾಕಲು ಬರಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.