ADVERTISEMENT

ಅಣ್ತಮ್ಮಗೆ ಲೂಟಿಯ ಚಪಲ: ಡಿ.ಕೆ ಸೋದರರ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 19:53 IST
Last Updated 16 ಜನವರಿ 2026, 19:53 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕೆಲವರಿಗೆ ದುಡ್ಡು ಮಾಡುವ ಚಪಲ. ನನಗೆ, ಜನರ ಜತೆ ನಿಂತು ಅವರ ಸೇವೆ ಮಾಡುವ ಚಪಲ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಅವರ ಹೇಳಿಕೆ ಬಗ್ಗೆ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಅವರು, ‘ನಾನೆಂದೂ ಬಾಯಿ ಚಪಲಕ್ಕೆ ಮಾತನಾಡುವುದಿಲ್ಲ. ಈ ಸೋದರರು ಮಾಡುವ ಅಕ್ರಮಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆ. ಅದೂ ಸಹ ಜನ ಸೇವೆಯೇ’ ಎಂದು ಉತ್ತರಿಸಿದರು.

‘ನನ್ನ ಚಪಲ ನನ್ನದು, ಅವರ ಚಪಲ ಅವರದ್ದು. ದಿನ ಬೆಳಗಾದರೆ ಯಾರ ಜಮೀನಿಗೆ ಬೇಲಿ ಹಾಕಬೇಕು, ಯಾರ ತಲೆ ಒಡೆಯಬೇಕು, ದುಡ್ಡು ಹೇಗೆ ಲೂಟಿ ಮಾಡಬೇಕು ಎಂದು ಯೋಚಿಸುವುದೇ ಕೆಲವರಿಗೆ ಚಪಲ. ಅಂತಹ ಚಪಲ ನನಗಿಲ್ಲ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೆ. ಆ ಅಣ್ಣತಮ್ಮಂದಿರ ಇಂತಹ ಚಪಲಗಳ ಬಗ್ಗೆ ಇನ್ನೆಷ್ಟು ಮಾತನಾಡುವುದು’ ಎಂದರು.

ADVERTISEMENT

‘ಸ್ವಜಾತಿಯವರೇ ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಆ ವ್ಯಕ್ತಿ ತಮ್ಮ ಸಮುದಾಯದ ಜನರಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಯೋಚಿಸಲಿ. ಅಕ್ರಮವಾಗಿ ಏನೆಲ್ಲಾ, ಹೇಗೆಲ್ಲಾ ಸಂಪಾದನೆ ಮಾಡಬೇಕು ಎಂದು ಯೋಚಿಸುವ ವ್ಯಕ್ತಿಯು ಜಾತಿ ಹೆಸರು ಹೇಳಿಕೊಂಡು ಬಂದರೆ, ಬೆಂಬಲ ಕೊಡಬೇಕೇ’ ಎಂದು ಪ್ರಶ್ನಿಸಿದರು.

ನಮ್ಮ ಕೆಲವು ದೋಷಗಳ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 9 ಸ್ಥಾನ ಲಭಿಸಿತು. ಇಲ್ಲದಿದ್ದಲ್ಲಿ ಕಾಂಗ್ರೆಸ್‌ 3–4 ಸ್ಥಾನಗಳಿಗೆ ಕುಸಿಯುತ್ತಿತ್ತು
ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

‘ಜೆಡಿಎಸ್‌ಗೂ ಮರಿ ಖರ್ಗೆಗೂ ಸಂಬಂಧವೇನು’

‘ಜೆಡಿಎಸ್‌ ಬಗ್ಗೆ ಮಾತನಾಡಲು ಪ್ರಿಯಾಂಕ್‌ ಖರ್ಗೆ ಯಾರು? ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಎಷ್ಟು ಜನ ಲೀಸ್‌ ಮೇಲೆ ಹೋಗಿದ್ದಾರೆ ಎಂಬುದನ್ನು ಪ್ರಿಯಾಂಕ್‌ ಖರ್ಗೆ ಅವರು ತಮ್ಮ ತಂದೆಯನ್ನು ಕೇಳಿ ತಿಳಿದುಕೊಳ್ಳಲಿ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿ ಉಳಿದಿದೆಯೇ? ಬಿಹಾರ ಮಧ್ಯ ಪ್ರದೇಶ ಮಹಾರಾಷ್ಟ್ರದಲ್ಲಿ ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ಮೊದಲು ನೋಡಿಕೊಳ್ಳಲಿ’ ಎಂದು ಕುಮಾರಸ್ವಾಮಿ ಹೇಳಿದರು.

‘ಬೃಹನ್‌ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾವ ಸ್ಥಿತಿಗೆ ಕುಸಿದಿದೆ ಎಂಬುದನ್ನು ಇವತ್ತಿನ ಫಲಿತಾಂಶ ತೋರಿಸಿಕೊಟ್ಟಿದೆ. ಪ್ರಿಯಾಂಕ್‌ ಅವರು ಅನಗತ್ಯ ವಿಚಾರಗಳನ್ನು ಬಿಟ್ಟು ತಮ್ಮ ತಂದೆಯವರು 40 ವರ್ಷದಿಂದ ಪ್ರತಿನಿಧಿಸಿದ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬುದರ ಬಗ್ಗೆ ಚರ್ಚಿಸಿ. ಕನಕಪುರ ರಾಮನಗರ ಮೈಸೂರು ಭಾಗಕ್ಕೆ ಸಿಕ್ಕಷ್ಟು ಅನುದಾನ ತಮ್ಮ ಭಾಗಕ್ಕೇಕೆ ಸಿಗುತ್ತಿಲ್ಲ ಎಂಬುದನ್ನು ಮರಿಖರ್ಗೆ ಕಂಡುಕೊಳ್ಳಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.