
ಎಚ್‌ಡಿಕೆ, ಸಿದ್ದರಾಮಯ್ಯ
ಬೆಂಗಳೂರು: ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ! ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ, ಅಷ್ಟೇ. ಮಾನ್ಯ ಮುಖ್ಯಮಂತ್ರಿಗಳೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಫೋನ್ ಕದ್ದಾಲಿಕೆ ಆರೋಪ ಕುರಿತಂತೆ ಆರ್. ಅಶೋಕ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಎಕ್ಸ್ ಪೋಸ್ಟ್ ಮೂಲಕ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನಿಮ್ಮ ಪುಂಖಾನುಪುಂಖ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಮುತುವರ್ಜಿ, ಆಸಕ್ತಿ ಇದ್ದಂತಿದೆ. ಪ್ರತಿಪಕ್ಷಗಳು ತಮ್ಮ ಕೆಲಸ ತಾವು ಮಾಡುತ್ತಿವೆ. ಜನರು ದಯೆ ತೋರಿ ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ದಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ಎಂದು ಪ್ರಶ್ನಿಸಿದ್ದಾರೆ.
ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದೆ. ಸ್ವತಂತ್ರ ಸರಕಾರವೂ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್ ವಾಶ್ ಮಾಡುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಐದು ವರ್ಷದ ಸರಕಾರವೂ.. ಈಗಿನ ನಿಮ್ಮ ಗುಪ್ತಚರವೂ ರಾಜಕಾರಣವನ್ನು ನಾನು ಕಂಡಿರುವುದೇ ಅಲ್ಲವೇ? ನಿಮ್ಮ ಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷ ತುಂಬಿದರೂ ಇನ್ನೂ ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ.. ಇದೆ.. ಇದೆ.. ಎಂದು ಹೇಳಿಕೊಳ್ಳುವ ಕರ್ಮ ನಿಮ್ಮದು? ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕುತ್ತಿಗೆಗೆ ಕುಣಿಕೆ ಬಿಗಿದ ಸರ್ವಾಧಿಕಾರಿ ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವದ ಬೇರುಗಳೇ ಇಳಿದಿಲ್ಲ. ರಾಜಕೀಯ ಲಾಭಕ್ಕೆ ಮಹಾತ್ಮ ಗಾಂಧಿ, ರಾಜಕೀಯ ಸ್ವಾರ್ಥಕ್ಕೆ ಪ್ರಜಾಪ್ರಭುತ್ವ, ರಾಜಕೀಯ ಫಸಲಿಗೆ ಸಾಮಾಜಿಕ ನ್ಯಾಯ.. ಇದೇ ನಿಮ್ಮ ರಾಜನೀತಿ. ಹೀಗಾಗಿಯೇ ಭಾರತವು ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆ ಎಂದು ನಂಬಿದ್ದೇನೆ. ಪ್ರಜಾಪ್ರಭುತ್ವ ಎಂದರೆ ಶಾಸಕರು ಗುಂಪುಗಾರಿಕೆ ನಡೆಸುವುದಲ್ಲ. ಶಾಸಕರು ಮುಖ್ಯಮಂತ್ರಿಯನ್ನು ಬೀದಿಯಲ್ಲಿ ಬೈಯುವುದಲ್ಲ, ಅದೇ ಶಾಸಕರು ಡಿಸಿಎಂಗೆ ಹಾದಿ ಬೀದಿಯಲ್ಲಿ ಅವಾಜ್ ಹಾಕುವುದಲ್ಲ. ಒಮ್ಮೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಮೇಲೆ ಐದೂ ವರ್ಷ ನಾನೇ ಸಿಎಂ.. ನಾನೇ ಸಿಎಂ.. ಎಂದು ಅಲುವತ್ತುಕೊಳ್ಳುವುದಲ್ಲ. ಸಾಕ್ಷಾತ್ ವಿಧಾನಸಭೆಯಲ್ಲಿಯೇ 'ಕುರ್ಚಿ ಬೇಕಿದ್ದರೆ ಒದ್ದು ಕಿತ್ತುಕೊಳ್ಳಬೇಕು' ಎಂದು ದರ್ಪ ತೋರುವುದಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ಜಾಹೀರಾತು ಹೆಸರಿನಲ್ಲಿ ಬೆದರಿಸುವುದು, ಬ್ಲ್ಯಾಕ್ ಮೇಲ್ ಮಾಡುವುದಲ್ಲ.. ಅಧಿಕಾರದ ಲಾಲಸೆಗೆ ಸಮಾಜವನ್ನು ಜಾತಿವಾರು, ಧರ್ಮವಾರು ಒಡೆದು ಆಳುವುದಲ್ಲ, ಆಶ್ರಯ ಕೊಟ್ಟು ರಾಜಕೀಯ ಬದುಕು ಕಟ್ಟಿಕೊಟ್ಟ ಪಕ್ಷಗಳಿಗೇ ಹಳ್ಳ ತೊಡುವುದಲ್ಲ.. ಇದಲ್ಲ ಪ್ರಜಾಪ್ರಭುತ್ವ, ಇದಲ್ಲ ಆಂತರಿಕ ಪ್ರಜಾಪ್ರಭುತ್ವ.. ನಿಮಗೆ ಅರ್ಥವಾಯಿತಾ ಸಿದ್ದರಾಮಯ್ಯನವರೇ? ನಿಮ್ಮಿಬ್ಬರ (ನೀವೂ ನಿಮ್ಮ ಡಿಸಿಎಂ) ಕುಚುಕು ಕುಚುಕುಗೆ ನಮಗೇನು ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನರು ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ.. ನಾನು ಎರಡು ಸಲವೂ ಅಧಿಕಾರ ಕಳೆದುಕೊಂಡವನು. ಇತಿಹಾಸ ಎಂದಿಗೂ ಮೌನವಾಗಿರುವುದಿಲ್ಲ ಎಂಬುದು ನಿಮಗೂ ಗೊತ್ತಿರಲಿ. ನೀವೂ ಚರಿತ್ರೆಯಿಂದ ಪಾರಾಗಲು ಆಗದು ಸಿದ್ದರಾಮಯ್ಯನವರೇ? ನಾನು ಪೋನ್ ಕದ್ದಾಲಿಕೆ ಮಾಡಿದ್ದಿದ್ದರೆ ಹೇಗಾದರೂ ಸರಿ, ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. ಹಾಗೆ ಮಾಡಿದ್ದಿದ್ದರೆ ಸಿದ್ದವನದಲ್ಲಿ ಕೂತು ಯಾವ ಕಬ್ಬೆಕ್ಕು ಕರಾಮತ್ತು ನಡೆಸಿತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೆ. ಅದು ನನಗೆ ಬೇಕಿರಲಿಲ್ಲ, ಕಳೆದುಕೊಂಡಿದ್ದರ ಬಗ್ಗೆಯೂ ನನಗೆ ಚಿಂತೆ ಇಲ್ಲ. ಆದರೆ, ಆ ಪಾಪಪ್ರಜ್ಞೆ ನಿಮ್ಮನ್ನು ಕಾಡುತ್ತಿದೆ, ಸದಾ ನೆರಳಿನಂತೆ! ಕದ್ದಾಲಿಕೆ ನನ್ನ ಗುಣವಲ್ಲ, ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದೇ ಆವಿಷ್ಕಾರ! ಅದೇ ನಿಮಗೆ ಬಂದಿರುವ ಸಂಸ್ಕಾರ!! ನಿಮಗೆ ಅಂಟಿರುವ ಕಳಂಕಕ್ಕೆ ಶ್ರೀ ನರೇಂದ್ರ ಮೋದಿ ಅವರನ್ನು ಏಕೆ ಎಳೆದು ತರುತ್ತೀರಿ? ನಿಮ್ಮ ತಟ್ಟೆಯನ್ನೊಮ್ಮೆ ನೋಡಿಕೊಳ್ಳಿ. ರಾಜ್ಯದಲ್ಲಿ ನೀನೇನು ಮಾಡುತ್ತಿದ್ದೀರಿ ಎನ್ನುವುದು ಎಲ್ಲರೂ ಬಲ್ಲರು. ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ (SIT) ಏನೇನು ಮಾಡುತ್ತಿದೆ ಎಂಬುದು ನನಗೂ ಗೊತ್ತಿದೆ. ಅಧಿಕಾರ ದುರ್ಬಳಕೆ, ಪ್ರತಿಪಕ್ಷಗಳ ವಿರುದ್ಧ ಸೇಡು ಸಾಧನೆ ನಿಮ್ಮ ನೈಜಗುಣ. ಅಷ್ಟು ಅವಗುಣಗಳನ್ನು ಮೈಮೇಲೆ ಹೇರಿಕೊಂಡು ಇನ್ನೊಬ್ಬರನ್ನು ನಿಂದಿಸುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ ಎಂದಿದ್ದಾರೆ.
ದೆಹಲಿಯಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡಾಗ ನೀವು ಯಾವ ಪಕ್ಷದಲ್ಲಿದ್ದಿರಿ ಎನ್ನುವುದನ್ನು ಅರೆಕ್ಷಣ ನೆನಪು ಮಾಡಿಕೊಳ್ಳಿ. ನಿಮಗೂ ಆತ್ಮಸಾಕ್ಷಿ ಎನ್ನುವುದು ಇರಬೇಕಲ್ಲಾ? ಆಗ ನಿಮ್ಮ ನಾಲಿಗೆಯಿಂದ ಉದುರಿದ್ದ ಸರಣಿ ನುಡಿಮುತ್ತುಗಳನ್ನು ಒಮ್ಮೆ ಪುನಾಸ್ಮರಣೆ ಮಾಡಿಕೊಳ್ಳಿ? ಅವತ್ತು ಅದೇ ಸೀತಾರಾಂ ಕೇಸರಿ ಬಗ್ಗೆ ತಾವು ಏನೇನು ಹೇಳಿದಿರಿ? ಆ ನಂತರದ ಕಾಲದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಅದೆಷ್ಟು ವಾಚಾಮಗೋಚರ ನಿಂದಿಸಿದ್ದಿರಿ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಿ. ಸಿದ್ದರಾಮಯ್ಯನವರೇ.., ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದರು. ರಾಜೀನಾಮೆ ಘೋಷಿಸಿದ ಮರುಕ್ಷಣದಲ್ಲೇ ಸಂಸತ್ತಿನಲ್ಲಿಯೇ ಶ್ರೀ ವಾಜಪೇಯಿ ಅವರು ಮುಕ್ತ ಬೆಂಬಲ ಕೊಡುತ್ತೇವೆ ಎಂದರೂ ಆ ಅಧಿಕಾರ ಬೇಡವೆಂದು ವಿನಯದಿಂದ ಧಿಕ್ಕರಿಸಿದರು. ಅವರ ಗರಡಿಯಲ್ಲಿ ಪಳಗಿ, ಈಗಲೂ ಬೆಳಗುತ್ತಿರುವ ನೀವೂ ಅಂಥ ಕೆಚ್ಚನ್ನು, ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ. ನಿಮ್ಮ ಕುಚುಕು ಗೆಳೆಯನ ಮೇಲೆ ಪ್ರೀತಿ ತೋರಿಸಿ.. ಗುಂಡಿಗೆ ಸಾಲುತ್ತಿಲ್ಲವೇ? ಮಿಸ್ಟರ್ ಸಿದ್ದರಾಮಯ್ಯನವರೇ, ಸೋತರೆ ಸೋಲಬೇಕು ಬಾಹುಬಲಿಯಂತೆ! ನಾನು ಸೋತಿದ್ದೇನೆ, ಓಡಿ ಹೋಗಿಲ್ಲ. ನಾನು ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ, ನೆನಪಿರಲಿ ಎಂದು ವಾಗ್ದಾಳ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.