ADVERTISEMENT

ತೇಜಸ್ವಿ ಸೂರ್ಯ ಕ್ಷಮೆ ಯಾಚಿಸಲಿ: ಎಚ್‌ಡಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 20:41 IST
Last Updated 29 ಸೆಪ್ಟೆಂಬರ್ 2020, 20:41 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಬೆಂಗಳೂರು ಉಗ್ರರ ನೆಲೆ ಎಂಬರ್ಥದಲ್ಲಿ ಮಾತನಾಡಿರುವ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕ್ಷಮೆ ಯಾಚಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಂಗಳವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ‘ಡಿ.ಜೆ. ಹಳ್ಳಿ ಘಟನೆಯಲ್ಲಿ ಉಗ್ರರ ಜತೆ ಸಂಪರ್ಕದಲ್ಲಿದ್ದವರು ಸಿಕ್ಕಿಬಿದ್ದಿದ್ದಾರೆ ಎಂಬ ಕಾರಣಕ್ಕೆ ಇಡೀ ಬೆಂಗಳೂರನ್ನು ಟೀಕಿಸುವುದು ಸರಿಯಲ್ಲ. ಟೀಕೆ ಉಗ್ರರ ವಿರುದ್ಧ ಇರಬೇಕು, ತಾಯಿಯಂತಹ ಊರಿನ ಬಗ್ಗೆಯಲ್ಲ’ ಎಂದು ಹೇಳಿದ್ದಾರೆ.

‘ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ. ಇದು ಬಿಜೆಪಿಯ ಹಿರಿಯರಿಗೆ ಮಾಡಿದ ಅವಮಾನ. ಬೆಂಗಳೂರು ಎಂದರೆ ಬಿಬಿಎಂಪಿ, 28 ವಿಧಾನಸಭೆ ಕ್ಷೇತ್ರ, ನಾಲ್ಕು ಲೋಕಸಭಾ ಕ್ಷೇತ್ರಗಳು ಮಾತ್ರವಲ್ಲ. ಬೆಂಗಳೂರು ನಮ್ಮ ಹೆಮ್ಮೆ. ಮತ ಧ್ರುವೀಕರಣಕ್ಕಾಗಿ ಬೆಂಗಳೂರನ್ನು ಅವಮಾನಿಸುವುದು ಕ್ಷುಲ್ಲಕ ಕೃತ್ಯ. ಸಂಬಂಧಿಸಿದವರಿಂದ ಬಿಜೆಪಿ ಕ್ಷಮೆ ಕೇಳಿಸಬೇಕು’ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ADVERTISEMENT

ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಜಗದ್ವಿಖ್ಯಾತಿ ಗಳಿಸಿದೆ. ಇದನ್ನು ಸಹಿಸದ ಉತ್ತರ ಭಾರತೀಯ ಷಡ್ಯಂತ್ರದ ಭಾಗವಾಗಿ ಈ ಹೇಳಿಕೆ ನೀಡಿರಬಹುದು ಎಂಬ ಅನುಮಾನವಿದೆ. ಕೆಲವರಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಹೆಚ್ಚು ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.