ADVERTISEMENT

ತಾಯಿ, ಅವಳಿ ಶಿಶುಗಳು ಮರಣ: ಸಚಿವ ಸುಧಾಕರ್ ವಜಾಕ್ಕೆ ಎಚ್‌ಡಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 16:03 IST
Last Updated 5 ನವೆಂಬರ್ 2022, 16:03 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ತಾಯಿ ಮತ್ತು ಅವಳಿ ಶಿಶುಗಳು ಸಾವನ್ನಪ್ಪಿದ ಘಟನೆ ಕುರಿತು ಲಘುವಾಗಿ ಪ್ರತಿಕ್ರಿಯಿಸುತ್ತಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಘಟನೆ ಕುರಿತು ಕುಮಾರಸ್ವಾಮಿ ಶುಕ್ರವಾರ ಟ್ವಿಟರ್‌ನಲ್ಲಿ ಹರಿಹಾಯ್ದಿದ್ದರು. ಸುಧಾಕರ್‌, ಚಾಮರಾಜನಗರದ ಸುಳವಾಡಿ ದೇವಸ್ಥಾನದ ಪ್ರಸಾದ ಸೇವಿಸಿ ಹಲವರು ಮೃತಪಟ್ಟ ಘಟನೆ ಪ್ರಸ್ತಾಪಿಸಿ ತಿರುಗೇಟು ನೀಡಿದ್ದರು. ಈ ಕುರಿತು ಶನಿವಾರವೂ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌ ನಾಯಕ, ‘ಸುಧಾಕರ್‌ ಅವರು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೈತಿಕತೆ ಇದ್ದರೆ ಸಚಿವರಿಂದ ರಾಜೀನಾಮೆ ‍ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

‘ತಾಯಿ ಮತ್ತು ಶಿಶುಗಳ ಪ್ರಕರಣದಲ್ಲಿ ಜನರನ್ನು ದಿಕ್ಕು ತಪ್ಪಿಸಲು ಸಚಿವರು ಯತ್ನಿಸುತ್ತಿದ್ದಾರೆ. ಸಾವಿನ ವಿಷಯದಲ್ಲೂ ಸಂಭ್ರಮಿಸಲು ಹೊರಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ಸಾವಿನ ಕೂಪಗಳನ್ನಾಗಿ ಪರಿವರ್ತಿಸಿದ ಕೀರ್ತಿ ಸುಧಾಕರ್‌ ಅವರದ್ದು. ಮೂವರ ಸಾವಿನ ವಿಷಯದಲ್ಲಿ ಕಡೆಯ ಪಕ್ಷದ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ವೈದ್ಯರು, ಸಿಬ್ಬಂದಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗೆ ಇಟ್ಟಿದ್ದೀರಿ. ಕೋವಿಡ್‌ ಹೆಸರಿನಲ್ಲಿ ಕೊಳ್ಳೆ ಹೊಡೆದಿರುವುದೂ ಗೊತ್ತಿದೆ. ನಿಮ್ಮ ಪರ್ಸಂಟೇಜ್‌ ವ್ಯವಹಾರದ ಕುರಿತು ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸದಂತೆ ಯಾರ ಕಾಲು ಹಿಡಿದಿದ್ದೀರಿ ಎಂಬುದೂ ಗೊತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.