ADVERTISEMENT

ಜೆಡಿಎಸ್‌ ಶಾಸಕರ ಸಭೆ ನಡೆಸಿದ ಎಚ್‌ಡಿಕೆ

ಪರಿಷತ್‌ ಸಭಾಪತಿ ಪದಚ್ಯುತಿ ಯತ್ನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 17:08 IST
Last Updated 2 ಫೆಬ್ರುವರಿ 2021, 17:08 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯವೂ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ರಾಜಕೀಯ ನಿಲುವು ತೆಗೆದುಕೊಳ್ಳುವ ಸಂಬಂಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ರಾತ್ರಿ ಪಕ್ಷದ ಶಾಸಕರ ಜತೆ ಸುದೀರ್ಘ ಸಭೆ ನಡೆಸಿದರು.

ಬಹುತೇಕ ಶಾಸಕರು ಸಭೆಗೆ ಹಾಜರಾಗಿದ್ದರು. ಪರಿಷತ್‌ ಸಭಾಪತಿಯ ಪದಚ್ಯುತಿ ಪ್ರಯತ್ನ, ನೂತನ ಸಭಾಪತಿಯ ಆಯ್ಕೆ, ವಿಧಾನಮಂಡಲ ಅಧಿವೇಶನ ಮತ್ತು ಸದನದ ಹೊರಗೆ ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆಯೂ ಶಾಸಕರ ಜತೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, ‘ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನದ ವಿಷಯದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಗೋಹತ್ಯೆ ನಿಷೇಧ ಕಾಯ್ದೆಗೆ ನಮ್ಮ ವಿರೋಧವಿದೆ. ವಿಷಯಾಧಾರಿತವಾಗಿ ಬೆಂಬಲ ನೀಡುತ್ತೇವೆ’ ಎಂದರು.

ADVERTISEMENT

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ‘ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲ. ಆದರೆ, ಕಾಂಗ್ರೆಸ್‌ನ ಒಂದು ಗುಂಪಿನ ನಾಯಕರ ಒತ್ತಡದಿಂದ ಮುಂದುವರಿದಿದ್ದಾರೆ. ಬಹುಮತ ಇಲ್ಲದೆಯೂ ನಾಚಿಕೆ ಬಿಟ್ಟು ಹುದ್ದೆಯಲ್ಲಿದ್ದಾರೆ. ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್‌ ಕೈ ಜೋಡಿಸಿರುವುದನ್ನು ಸಹಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಕುಮಾರಸ್ವಾಮಿ ಟೀಕಿಸಿದರು.

ಜೆಡಿಎಸ್‌ ಸಣ್ಣ ಪ್ರಮಾಣದಲ್ಲಿ ಇರಬಹುದು. ಆದರೆ, ರಾಜ್ಯಕ್ಕೆ ಅನಿವಾರ್ಯ. ಅದೇ ಕಾರಣಕ್ಕಾಗಿ ತಮ್ಮ ಪಕ್ಷವನ್ನು ಜನರು ಇನ್ನೂ ಉಳಿಸಿದ್ದಾರೆ. ತಮಗೆ ಸಿದ್ದರಾಮಯ್ಯ ಅವರ ಪ್ರಮಾಣಪತ್ರ ಬೇಕಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.