ADVERTISEMENT

ಹಿಜಾಬ್: ಸರ್ಕಾರ ತಾಯಿ ಹೃದಯ ತೋರಲಿ ಎಂದ ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:23 IST
Last Updated 18 ಮಾರ್ಚ್ 2022, 4:23 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಹಿಜಾಬ್‌ ಅಥವಾ ಬೇರೆ ಯಾವುದೇ ವಿಷಯಕ್ಕಿಂತ ಹೆಣ್ಣು ಮಕ್ಕಳ ಶಿಕ್ಷಣ ಮುಖ್ಯ. ಇನ್ನಾದರೂ ಸರ್ಕಾರ ತಾಯಿ ಹೃದಯದಿಂದ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಉದಾತ್ತವಾಗಿ ಹೆಜ್ಜೆ ಇಡಬೇಕು. ಮಕ್ಕಳ‌ ಹಾಲಿನಂತಹ ಮನಸ್ಸನ್ನು ಒಡೆಯಬಾರದು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು,ಮಕ್ಕಳ ಮನಸ್ಸಿನಲ್ಲಿ ದ್ವೇಷದ ದಳ್ಳುರಿಯನ್ನು ಯಾರೂ ಬಿತ್ತಬಾರದು, ಅಂತಹ ಭಾವನೆಗಳನ್ನು ಯಾರೂ ಪ್ರೋತ್ಸಾಹಿಸಬಾರದು. ಮುಸ್ಲಿಂ ಮಕ್ಕಳಿಗೆ ಆ ದುಪಟ್ಟಾವನ್ನು ತಲೆಯ ಸೆರಗಿನ ರೀತಿ ಧರಿಸಲು ಅವಕಾಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ. ಆಗ ಸಮವಸ್ತ್ರ ಬಿಟ್ಟು ಬೇರೆ ವಸ್ತ್ರ ಧರಿಸುವ ಅವಶ್ಯಕತೆ ಇರುವುದಿಲ್ಲ. ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದು ಅವರು ಹೇಳಿದರು.

ಹಿಜಾಬ್‌ ವಿಷಯದಲ್ಲಿ ಹೈಕೋರ್ಟ್‌ ನೀಡಿರುವತೀರ್ಪಿನ ಪಾಲನೆ ಎಲ್ಲರ ಕರ್ತವ್ಯ. ಒಬ್ಬ ಹೆಣ್ಣು ಮಗು ಕಲಿತರೆ ಆ ಕುಟುಂಬಕ್ಕೆ ಬೆಳಕು ಬಂದಂತೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ರಾಜಕೀಯ ಕಾರಣಕ್ಕೆ ಮುಂಚೂಣಿಗೆ ಬಂದ ಈ ಎಲ್ಲ ಅನಪೇಕ್ಷಿತ ವಿವಾದಗಳಲ್ಲಿ ಮಕ್ಕಳೇ ಬಲಿಪಶುಗಳು. ಈ ವಿವಾದಗಳನ್ನು ಇನ್ನೂ ಜೀವಂತ ಇಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅದು ಸರಿಯಲ್ಲ ಎಂದರು.

ಹಿಜಾಬ್ ಹಿಂದೆ ಕಾಣದ ಕೈಗಳು ಇವೆ ಎಂದು ಹೈಕೋರ್ಟ್‌ ಹೇಳಿದೆ. ಸರ್ಕಾರ ಆ ಕೈಗಳನ್ನು ಪತ್ತೆ ಹಚ್ಚಿ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.