ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರ ಸ್ಥಗಿತ: ಆರೋಗ್ಯ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:22 IST
Last Updated 17 ಮೇ 2025, 16:22 IST
   

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಜನೌಷಧ ಕೇಂದ್ರಗಳ ಪ್ರಾರಂಭಕ್ಕೆ ಅನುಮೋದನೆ ನೀಡದಿರಲು ನಿರ್ಧರಿಸಿರುವ ಆರೋಗ್ಯ ಇಲಾಖೆ, ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರಗಳ ಸ್ಥಗಿತಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ. 

ಈ ಬಗ್ಗೆ ಇಲಾಖೆ ಆದೇಶ ಹೊರಡಿಸಿದೆ. ಸದ್ಯ 31 ಜನೌಷಧ ಕೇಂದ್ರಗಳ ಪ್ರಾರಂಭಕ್ಕೆ ಅರ್ಜಿಗಳು ಆಯುಕ್ತರ ಹಂತದಲ್ಲಿ ಬಾಕಿ ಉಳಿದಿವೆ. ರೋಗಿಗಳು ಯಾವುದೇ ಔಷಧವನ್ನು ಆಸ್ಪತ್ರೆಯ ಹೊರಗೆ ಖರೀದಿಸದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳ ಹಂಚಿಕೆಯನ್ನು ಸ್ಥಗಿತಗೊಳಿಸಲು, ಅನುಮೋದನೆಗೆ ಬಾಕಿ ಇರುವ ಅರ್ಜಿಗಳನ್ನು ತಿರಸ್ಕರಿಸಲು ಆದೇಶದಲ್ಲಿ ತಿಳಿಸಲಾಗಿದೆ. 

ಭಾರತೀಯ ಔಷಧ ಮಂಡಳಿಯು (ಬಿಪಿಪಿಐ) ಜನೌಷಧ ಕೇಂದ್ರಗಳಿಗೆ ನೋಡಲ್ ಸಂಸ್ಥೆಯಾಗಿದೆ. ಸದ್ಯ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು, ಒಪ್ಪಂದದ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ. 

ADVERTISEMENT

ಜನೌಷಧ ಖರೀದಿಸಲು ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್) ಬಿಪಿಪಿಐಗೆ ವಿಶೇಷ ದರ ಗೊತ್ತುಪಡಿಸಲು ಸೂಚಿಸಿದೆ. ಕೇಂದ್ರಗಳ ಸ್ಥಗಿತಕ್ಕೆ ಪರ್ಯಾಯವಾಗಿ, ಆಸ್ಪತ್ರೆಗಳು ಬಿಪಿಪಿಐ ಇಂದ ಔಷಧಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ. 

ಸರ್ಕಾರಿ ಆಸ್ಪತ್ರೆಗಳ ಹೊರಗೆ ಜನೌಷಧ ಕೇಂದ್ರಗಳ ಸ್ಥಾಪನೆಯು ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿನ ಕೇಂದ್ರಗಳನ್ನು ಮುಂದುವರಿಸಬಹುದಾಗಿದೆ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.