ADVERTISEMENT

ಆಸ್ಪತ್ರೆಗಳಲ್ಲಿ ದೇವರ ಗುಡಿ: ಆರೋಗ್ಯ ಸಚಿವ ಶ್ರೀರಾಮುಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:51 IST
Last Updated 21 ಅಕ್ಟೋಬರ್ 2019, 19:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದೇವಸ್ಥಾನ ನಿರ್ಮಿಸಿ, ಅದು ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಜೈನ ಧರ್ಮದ್ದಾದರೂ ಸರಿ, ಇದರಿಂದ ರಚನಾತ್ಮಕ ಶಕ್ತಿ (ಪಾಸಿಟಿವ್‌ ಎನರ್ಜಿ) ಸಿಗುತ್ತದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಸಹಿತ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ವಿಕಾಸಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ನಾನು ಕಂಡಂತೆ ಖಾಸಗಿ ಆಸ್ಪತ್ರೆಗಳಲ್ಲಿದೇವಸ್ಥಾನ ಅಥವಾ ದೇವರುಗಳನ್ನು ಇಡಲಾಗಿರುತ್ತದೆ. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲೂಸರ್ವಧರ್ಮಿಯ ದೇವಸ್ಥಾನ ಅಥವಾ ಪ್ರಾರ್ಥನಾ ಸ್ಥಳವನ್ನು ನಿರ್ಮಿಸಬಹುದು. ಈ ಬಗ್ಗೆ ಎಲ್ಲ ಜಿಲ್ಲಾ ವೈದ್ಯಾಧಿಕಾರಿಗಳು ಚಿಂತಿಸಿ ಕ್ರಮ ಕೈಗೊಳ್ಳಿ, ಇಲಾಖೆಯಲ್ಲಿ ಹಣದ ಕೊರತೆ ಇಲ್ಲ’ ಎಂದರು.

‘ಇಲಾಖೆಯಲ್ಲಿರುವ ಹಣದ ಸದ್ಬಳಕೆಗೆ ವ್ಯವಸ್ಥೆಯಿಲ್ಲ. ಬಡವರಿಗೆ, ಸಾರ್ವಜನಿಕರಿಗೆ ಆದ್ಯತೆ ಕೊಟ್ಟು ಕೆಲಸ ಮಾಡಿ. ನಿಧಿ ಬಳಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂದಿದೆ. ಡಿಸೆಂಬರ್‌ ಒಳಗೆ ಎಲ್ಲಜಿಲ್ಲೆಗಳ ಅಧಿಕಾರಿಗಳೂ ಶೇ 90ರಷ್ಟು ನಿಧಿ ಬಳಸಬೇಕು’ ಎಂದರು.

ADVERTISEMENT

‘ಎಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಕನಿಷ್ಠ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಿ ಅವುಗಳನ್ನು ಮಾದರಿ ಕೇಂದ್ರಗಳಾಗಿ ಅಭಿವೃದ್ದಿ ಪಡಿಸಬೇಕು. ಮಾದರಿ ಪ್ರಾಥಮಿಕ ಕೇಂದ್ರಗಳಿಗೆ ₹ 3 ಲಕ್ಷ,2 ಲಕ್ಷ ಹಾಗೂ 1 ಲಕ್ಷದಂತೆ ನಗದು ಬಹುಮಾನ ನೀಡಿ ಪ್ರೊತ್ಸಾಹಿಸಲಾಗುವುದು’ ಎಂದರು.

ಇದುವರೆಗೆ 77.10 ಲಕ್ಷ ಆಯುಷ್ಮಾನ್‌ ಕಾರ್ಡ್ ವಿತರಿಸಲಾಗಿದ್ದರೂ,ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ದಾರರನ್ನು ನಿರ್ಲಕ್ಷಿಸುತ್ತಿವೆ ಎಂದು ಹಲವು ವೈದ್ಯರು ಸಚಿವರ ಗಮನ ಸೆಳೆದರು. ಸದ್ಯದಲ್ಲೇ ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ಕರೆದು ಚರ್ಚಿಸುವುದಾಗಿ ಸಚಿವರು ತಿಳಿಸಿದರು.

ಇಲಾಖೆ ನೀಡುವ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸದ ಆಸ್ಪತ್ರೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.