ಕರ್ನಾಟಕ ಮಾಧ್ಯಮ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಆಯೇಶಾ ಖಾನಂ, ಬಿ.ಕೆ. ರವಿ ಹಾಜರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ. ಸುಳ್ಳು ಸುದ್ದಿಗಳಿಂದಾಗಿಯೇ ಕೋಮು ಗಲಭೆಗಳು ನಡೆದು, ಜನರ ಜೀವಕ್ಕೂ ಅಪಾಯ ಎದುರಾಗಿವೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ‘ಸುಳ್ಳು ಸುದ್ದಿ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ’ ವಿಷಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಜಾಲತಾಣಗಳಲ್ಲಿ ನೈಜ ಹಾಗೂ ಸುಳ್ಳು ಸುದ್ದಿಗಳ ನಡುವಿನ ವ್ಯತ್ಯಾಸ ಸುಲಭಕ್ಕೆ ನಿಲುಕದಂತಾಗಿದೆ. ಸತ್ಯವಲ್ಲದ ಸುದ್ದಿಗಳನ್ನು ನಂಬಿ ಕೆಲವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ’ ಎಂದರು.
‘ಮುಂದಿನ 20-30 ವರ್ಷಗಳಲ್ಲಿ ದೇಶದ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಗಳಲ್ಲಿನ ಚಿನ್ನವನ್ನೂ ಕಿತ್ತುಕೊಳ್ಳುತ್ತಾರೆ ಎಂಬುದೂ ಸೇರಿದಂತೆ ಹಲವು ತಪ್ಪು ಮಾಹಿತಿಗಳನ್ನು ಬಿತ್ತುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇಂತಹ ಸುದ್ದಿಗಳನ್ನು ಕುರುಡಾಗಿ ನಂಬಿ ವಾಟ್ಸಪ್, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೊದಲು ಸತ್ಯಾನ್ವೇಷಣೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಕಳೆದ 10 ವರ್ಷಗಳಿಂದ ಈಚೆಗೆ ತಪ್ಪು ಮಾಹಿತಿ ಹರಡುವ ಪ್ರವೃತ್ತಿ ವೇಗವಾಗಿದೆ. ಕೋಲಾಹಲ ಸೃಷ್ಟಿಸುವ ಸುದ್ದಿಗಳಿಗೆ ಒಲವು ತೋರಿದ್ದಾರೆ. ಕೆಲ ಮಾಧ್ಯಮಗಳೂ ಅಂತಹ ಸುದ್ದಿಗಳ ಬೆನ್ನು ಬೀಳುತ್ತಿವೆ. ಮುದ್ರಣ, ರೇಡಿಯೊ, ದೃಶ್ಯ ಮಾಧ್ಯಮಗಳ ವಿಶ್ವಾಸಾರ್ಹ ಸುದ್ದಿಗಳನ್ನೂ ನಂಬದ ಸ್ಥಿತಿಗೆ ಸಮಾಜ ತಲುಪಿದೆ’ ಎಂದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಮಾತನಾಡಿ, ‘ಮುಖ್ಯವಾಹಿನಿಗಳು ಸಾಮಾಜಿಕ ಜಾಲತಾಣದ ಸುದ್ದಿಗಳನ್ನು ನಿತ್ಯವೂ ವಿಮರ್ಶೆಗೆ ಒಳಪಡಿಸಬೇಕು. ತಪ್ಪು ಮಾಹಿತಿ ಪ್ರಸಾರ ಮಾಡದೇ ಇರುವ ನಿರ್ಧಾರ ಪ್ರಕಟಿಸಬೇಕು. ಸರ್ಕಾರಗಳು ಮಾಧ್ಯಮವನ್ನು ನಿಯಂತ್ರಿಸುವ ಪರಿಸ್ಥಿತಿ ತಂದುಕೊಳ್ಳಬಾರದು’ ಎಂದು ಹೇಳಿದರು.
ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಕಾರ್ಯದರ್ಶಿ ಸಿ. ರೂಪಾ ಉಪಸ್ಥಿತರಿದ್ದರು.
ತಮ್ಮ ತಂದೆ ಗುಂಡೂರಾವ್ ಅವಧಿಯಲ್ಲಿ ಮಾಧ್ಯಮ ಅಕಾಡೆಮಿ ಸ್ಥಾಪಿಸಲಾಯಿತು. ಅಕಾಡೆಮಿಯ ಮೊದಲ ಮಹಿಳಾ ಅಧ್ಯಕ್ಷೆ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿದೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
‘ಅಧಿಕಾರಕ್ಕಾಗಿ ಜಾಲತಾಣ ದುರ್ಬಳಕೆ’
ಸುಳ್ಳು ಸುದ್ದಿಗಳು ಸಮಾಜ ಮತ್ತು ಪ್ರಜಾಪ್ರಭುತ್ವದ ಸ್ವರೂಪಕ್ಕೆ ಧಕ್ಕೆ ತರುತ್ತಿವೆ. ಅಧಿಕಾರಕ್ಕಾಗಿ ಇಂತಹ ಸುದ್ದಿಗಳನ್ನು ಕೆಲ ರಾಜಕೀಯ ಪಕ್ಷಗಳೇ ಹಬ್ಬಿಸುತ್ತಿವೆ ಎಂದು ಪತ್ರಕರ್ತ ಶ್ರೀನಿವಾಸನ್ ಜೈನ್ ಹೇಳಿದರು. ರಾಜಕಾರಣಿಗಳು ತಮ್ಮ ಹಿತಾಸಕ್ತಿ ಸಾಧನೆಗಾಗಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಗೊತ್ತಿದ್ದೂ ಸೃಷ್ಟಿಸುವ ಸುಳ್ಳು ಸುದ್ದಿಗಳನ್ನು ಇನ್ನೂ ಕೆಲವರು ಗೊತ್ತಿಲ್ಲದೇ ಜಾಲತಾಣಗಳಲ್ಲಿ ಹರಿಬಿಡುತ್ತಾರೆ ಎಂದರು. ‘ಹಿಂದೆ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ದೀಪಾವಳಿಗಿಂತ ಮುಸ್ಲಿಮರ ಹಬ್ಬದಲ್ಲಿ ಹೆಚ್ಚು ವಿದ್ಯುತ್ ಸರಬರಾಜು ಮಾಡಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪ ಮಾಡಿದ್ದರು. ಅಂಕಿಅಂಶಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಯಿತು. ಅಧಿಕಾರ ಚುನಾವಣಾ ಲಾಭಕ್ಕಾಗಿ ಇಂತಹ ಸುಳ್ಳು ಸುದ್ದಿ ಹಬ್ಬಿಸುವವರನ್ನು ಸಮಾಜದ ಮುಂದೆ ಸತ್ಯದ ಸಹಿತ ನಿಲ್ಲಿಸಿದಾಗ ಅಪಪ್ರಚಾರಗಳಿಗೆ ಕಡಿವಾಣ ಹಾಕಲು ಸಾಧ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.